ದಾವಣಗೆರೆ: ಜಿಮ್ ಮುಗಿಸಿ ಮನೆಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಯುವ ಬಾಡಿಬಿಲ್ಡರ್ ಒಬ್ಬರು ಮೃತಪಟ್ಟಿರುವ ದುರಂತ ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ.
ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಹಾಗೂ ಅಂತರರಾಷ್ಟ್ರೀಯ ಬಾಡಿಬಿಲ್ಡಿಂಗ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ 26 ವರ್ಷದ ಸುಶೀಲ್ ಕುಮಾರ್ ಮೃತಪಟ್ಟವರು. ರಾತ್ರಿ ಸುಮಾರು 8:30ರ ವೇಳೆಗೆ ಜಿಮ್ ಮುಗಿಸಿಕೊಂಡು ಮನೆಗೆ ಬಂದಿದ್ದ ಸುಶೀಲ್, ತಲೆ ಸುತ್ತುವುದಾಗಿ ಹೇಳಿ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಮಾರ್ಗ ಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಲೋ ಬಿಪಿ ಹಾಗೂ ಹೃದಯಾಘಾತದ ಕಾರಣದಿಂದ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬಾಡಿಬಿಲ್ಡಿಂಗ್ನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದ ಸುಶೀಲ್ ಕುಮಾರ್, ಯುವಕರಿಗೆ ತರಬೇತಿ ನೀಡುವ ಮೂಲಕವೂ ಪರಿಚಿತರಾಗಿದ್ದರು. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.



