ಐಪಿಎಲ್ 2027ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮತ್ತೆ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆಯೇ? ಸದ್ಯ ಕ್ರಿಕೆಟ್ ವಲಯದಲ್ಲಿ ಇಂತಹದ್ದೊಂದು ಚರ್ಚೆ ಜೋರಾಗಿದೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮತ್ತೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ವಹಿಸಲು ಮುಂದಾಗಿದೆ ಎಂಬ ವರದಿಗಳು ಹೊರಬಿದ್ದಿವೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಳೆದ ಸೀಸನ್ನಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ಇಂಡಿಯನ್ಸ್, ಮುಂದಿನ ಆವೃತ್ತಿಯಲ್ಲಿ ತಂಡವನ್ನು ಮತ್ತೆ ಗೆಲುವಿನ ಹಾದಿಗೆ ತರಲು ನಾಯಕತ್ವ ಬದಲಾವಣೆಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ತಿಲಕ್ ವರ್ಮಾ ನಾಯಕತ್ವಕ್ಕೆ ರೋಹಿತ್ ಒಲವು!
ಮುಂಬೈ ಇಂಡಿಯನ್ಸ್ ಭವಿಷ್ಯದ ನಾಯಕತ್ವದ ಕುರಿತು ರೋಹಿತ್ ಶರ್ಮಾ ಅವರೊಂದಿಗೆ ಚರ್ಚೆ ನಡೆಸಿತ್ತು ಎನ್ನಲಾಗಿದೆ. ಈ ವೇಳೆ ಯುವ ಆಟಗಾರ ತಿಲಕ್ ವರ್ಮಾ ಅವರನ್ನು ಭವಿಷ್ಯದ ನಾಯಕನನ್ನಾಗಿ ಬೆಳೆಸುವಂತೆ ರೋಹಿತ್ ಸಲಹೆ ನೀಡಿದ್ದರಂತೆ. ತಾವು ಮಾರ್ಗದರ್ಶಕರಾಗಿ ಉಳಿದು ಯುವ ಆಟಗಾರನಿಗೆ ಬೆಂಬಲ ನೀಡುವ ಆಸಕ್ತಿಯನ್ನೂ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.
ಫ್ರಾಂಚೈಸಿ ಮನವಿಗೆ ಒಪ್ಪಿದ ಹಿಟ್ಮ್ಯಾನ್!
ಆದರೆ, ತಂಡದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್, ಅನುಭವಿ ನಾಯಕ ರೋಹಿತ್ ಶರ್ಮಾ ಅವರೇ ಮತ್ತೆ ತಂಡದ ಜವಾಬ್ದಾರಿ ವಹಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ ಎನ್ನಲಾಗಿದೆ. ಈ ಸಂಬಂಧ ನಡೆದ ಮಾತುಕತೆಗಳ ಬಳಿಕ ರೋಹಿತ್ ಕೂಡ ನಾಯಕತ್ವ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಕೋಚಿಂಗ್ ಸಿಬ್ಬಂದಿ ನೇಮಕದಲ್ಲೂ ರೋಹಿತ್ ಪಾತ್ರ?
ಮುಂಬೈ ಇಂಡಿಯನ್ಸ್ ತನ್ನ ಕೋಚಿಂಗ್ ವಿಭಾಗದಲ್ಲೂ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ. ಕೀರನ್ ಪೊಲಾರ್ಡ್, ರಾಬಿನ್ ಉತ್ತಪ್ಪ ಮತ್ತು ಮಿಚೆಲ್ ಮೆಕ್ಲೆನಗನ್ ಅವರಂತಹ ಮಾಜಿ ಆಟಗಾರರಿಗೆ ಕೋಚಿಂಗ್ ಜವಾಬ್ದಾರಿ ನೀಡಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲೂ ರೋಹಿತ್ ಶರ್ಮಾ ಅವರ ಸಲಹೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ಮುಂದಿನ ನಡೆ ಏನು?
ಇದೀಗ ಎಲ್ಲರ ಗಮನ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಮೇಲಿದೆ. ನಾಯಕತ್ವದಿಂದ ಕೆಳಗಿಳಿದರೆ ಅವರು ತಂಡದಲ್ಲಿ ಆಟಗಾರನಾಗಿ ಮುಂದುವರಿಯುತ್ತಾರೆಯೇ ಅಥವಾ ಬೇರೆ ಫ್ರಾಂಚೈಸಿಗೆ ಟ್ರೇಡ್ ಆಗುತ್ತಾರೆಯೇ ಎಂಬ ಕುತೂಹಲ ಮೂಡಿದೆ.
ಒಟ್ಟಿನಲ್ಲಿ, ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಆದರೆ, ಈ ಬಗ್ಗೆ ಫ್ರಾಂಚೈಸಿಯಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ಐಪಿಎಲ್ 2027ರಲ್ಲಿ ಮುಂಬೈ ತಂಡದ ನಾಯಕ ಯಾರು ಎಂಬುದಕ್ಕೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ.









