ಮಂಡ್ಯ: ವಿದ್ಯಾರ್ಥಿನಿಯರಿಗೆ ಮೊಬೈಲ್ನಲ್ಲಿ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಕಾಲೇಜಿನ ಉಪನ್ಯಾಸಕರೊಬ್ಬರಿಗೆ ವಿದ್ಯಾರ್ಥಿನಿಯರೇ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ಉಪನ್ಯಾಸಕ ಗಂಗಾ ಎಂಬುವವರು ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ‘I LOVE YOU CHINNU’ ಸೇರಿದಂತೆ ಪ್ರೀತಿಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದರು ಎಂಬುದು ವಿದ್ಯಾರ್ಥಿನಿಯರ ಆರೋಪವಾಗಿದೆ.
ಉಪನ್ಯಾಸಕರ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಆಕ್ರೋಶಗೊಂಡಿದ್ದು, ಕಾಲೇಜಿನ ಸ್ಟಾಫ್ ರೂಂನಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸರ ಮುಂದೆಯೇ ಉಪನ್ಯಾಸಕರನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಯರು ಪ್ರಶ್ನಿಸುತ್ತಿದ್ದಂತೆ ಉಪನ್ಯಾಸಕರು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ ಉಪನ್ಯಾಸಕರು ಮಾಸ್ಕ್ ಧರಿಸಿಕೊಂಡಿದ್ದಾರೆ ಎನ್ನಲಾಗಿದೆ.
ನಾಗಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರ ಆರೋಪದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.









