HomeKarnataka Newsತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಗಳಿಗೆ ಪಾಲಿಲ್ಲ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಗಳಿಗೆ ಪಾಲಿಲ್ಲ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್

For Dai;y Updates Join Our whatsapp Group

Spread the love

ಬೆಂಗಳೂರು: ತಾತನು ಸ್ವಂತವಾಗಿ ಸಂಪಾದಿಸಿದ ಆಸ್ತಿಯು ಕುಟುಂಬ ವಿಭಜನೆಯ ಬಳಿಕ ತಂದೆಯ ಪಾಲಿಗೆ ಬಂದರೂ, ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ. ಅಂತಹ ಆಸ್ತಿಯನ್ನು ಹಿಂದೂ ಅವಿಭಕ್ತ ಕುಟುಂಬದ (HUF) ಆಸ್ತಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ, ಇಂತಹ ಆಸ್ತಿಯಲ್ಲಿ ಮೊಮ್ಮಗಳು ಪಾಲು ಕೇಳಲು ಕಾನೂನಾತ್ಮಕ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್. ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಷಾ ಅವರು ಉಲ್ಲೇಖಿಸಿದ್ದ ಆಸ್ತಿಗಳನ್ನು ಅವರ ತಾತ ಸ್ವಂತವಾಗಿ ಸಂಪಾದಿಸಿದ್ದರು ಎಂಬುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. ಬಳಿಕ ಕುಟುಂಬದ ಒಳಗಿನ ಒಪ್ಪಂದದ ಮೂಲಕ ತಾತ ತಮ್ಮ ಮಕ್ಕಳ ನಡುವೆ ಆಸ್ತಿಯನ್ನು ಹಂಚಿಕೆ ಮಾಡಿದ್ದರು. ಈ ವೇಳೆ ತಂದೆಯ ಪಾಲಿಗೆ ಬಂದ ಆಸ್ತಿ, ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ ಹೊರತು ಪಿತ್ರಾರ್ಜಿತ ಅಥವಾ ಜಂಟಿ ಕುಟುಂಬದ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಿತಾಕ್ಷರ ಕಾನೂನಿನ ಪ್ರಕಾರ, ವ್ಯಕ್ತಿಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಚ್ಛೆಯಂತೆ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕು ಇರುತ್ತದೆ. ಈ ಆಸ್ತಿಗಳು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಾಗಿದ್ದವು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಮರ್ಪಕ ಸಾಕ್ಷ್ಯವನ್ನು ಅರ್ಜಿದಾರರು ನ್ಯಾಯಾಲಯದ ಮುಂದೆ ಮಂಡಿಸಿಲ್ಲ ಎಂದು ಪೀಠ ಹೇಳಿದೆ.

ಹೀಗಾಗಿ, ಅರ್ಜಿದಾರರು ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಸಾಬೀತುಪಡಿಸುವಲ್ಲಿ ವಿಫಲರಾಗಿರುವುದರಿಂದ, ಆ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಹೊಂದಿಲ್ಲ. ತಾತನ ಸ್ವಯಾರ್ಜಿತ ಆಸ್ತಿಯನ್ನು ಜಂಟಿ ಕುಟುಂಬದ ಆಸ್ತಿ ಎಂದು ಪರಿಗಣಿಸಿ ಪಾಲು ಬೇಡುವ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿ, ಉಷಾ ಎನ್. ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರರಾದ ಉಷಾ ಎನ್. ಸ್ವಾಮಿ ಅವರು 1979ರಲ್ಲಿ ವೈದ್ಯರಾಗಿರುವ ಜವರಯ್ಯ ಎನ್. ಸ್ವಾಮಿ ಅವರನ್ನು ವಿವಾಹವಾಗಿದ್ದು, ಬಳಿಕ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದರು.

ತಮ್ಮ ಗಮನಕ್ಕೆ ಬಾರದೆ ಕುಟುಂಬಕ್ಕೆ ಸೇರಿದ 10 ಎಕರೆ ಜಮೀನನ್ನು ಪೋಷಕರು ಮಾರಾಟ ಮಾಡಿದ್ದಾರೆ. ಅಲ್ಲದೆ, ತಂದೆಗೆ ಸೇರಿದ ಪಿತ್ರಾರ್ಜಿತ ಆಸ್ತಿಯಲ್ಲಿ ಗಣಿಗಾರಿಕೆ ನಡೆಸಿ ಗಳಿಸಿದ ಹಣದಿಂದ ಇತರೆ ಆಸ್ತಿಗಳನ್ನು ಸಂಪಾದಿಸಲಾಗಿದೆ. ಆದ್ದರಿಂದ ಆಸ್ತಿಗಳು ಹಾಗೂ ಬ್ಯಾಂಕ್ ಠೇವಣಿಗಳಲ್ಲಿಯೂ ತಮಗೆ ಪಾಲು ಸಿಗಬೇಕು ಎಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಆದರೆ, ಈ ಆಸ್ತಿಗಳು ಪೂರ್ವಜರಿಂದ ಬಂದ ಆಸ್ತಿಗಳಲ್ಲ ಹಾಗೂ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯೂ ಅಲ್ಲ ಎಂದು ಪೋಷಕರು ವಾದಿಸಿದ್ದರು. ವಿಚಾರಣಾ ನ್ಯಾಯಾಲಯವೂ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನೂ ಇದೀಗ ಹೈಕೋರ್ಟ್ ತಳ್ಳಿ ಹಾಕಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!