HomeKarnataka Newsಜೀವಂತ ವೃದ್ಧೆಗೆ ಮರಣ ಪ್ರಮಾಣ ಪತ್ರ; ಅಧಿಕಾರಿಗಳ ಎಡವಟ್ಟಿಗೆ ಬದುಕೇ ಸಂಕಷ್ಟ!

ಜೀವಂತ ವೃದ್ಧೆಗೆ ಮರಣ ಪ್ರಮಾಣ ಪತ್ರ; ಅಧಿಕಾರಿಗಳ ಎಡವಟ್ಟಿಗೆ ಬದುಕೇ ಸಂಕಷ್ಟ!

For Dai;y Updates Join Our whatsapp Group

Spread the love

ಹಾವೇರಿ: ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಜೀವಂತವಾಗಿರುವ ವೃದ್ಧೆಯೊಬ್ಬರು ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟವರಾಗಿ ದಾಖಲಾಗಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ ಅವರ ತಾಯಿ ಶಂಕ್ರವ್ವ ಮೀಳ್ಳಿ ಇತ್ತೀಚೆಗೆ ನಿಧನರಾಗಿದ್ದು, ಮರಣ ಪ್ರಮಾಣ ಪತ್ರಕ್ಕಾಗಿ ಶಿವಗಂಗವ್ವ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಮೃತ ತಾಯಿಯ ಹೆಸರಿನಲ್ಲಿ ಪ್ರಮಾಣ ಪತ್ರ ನೀಡುವ ಬದಲು, ಜೀವಂತವಾಗಿರುವ ಶಿವಗಂಗವ್ವ ಅವರ ಹೆಸರಿನಲ್ಲೇ ಮರಣ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ.

ಈ ಎಡವಟ್ಟಿನ ಬಗ್ಗೆ ಶಿವಗಂಗವ್ವ ಅವರಿಗೆ ಆರಂಭದಲ್ಲಿ ಮಾಹಿತಿ ಇರಲಿಲ್ಲ. ಇತ್ತೀಚೆಗೆ ಬ್ಯಾಂಕ್‌ಗೆ ಹಣ ತೆಗೆಯಲು ಹೋದ ವೇಳೆ ತಮ್ಮ ಹೆಸರಿನಲ್ಲೇ ಮರಣ ಪ್ರಮಾಣ ಪತ್ರ ದಾಖಲಾಗಿರುವ ವಿಷಯ ತಿಳಿದು ಅವರು ಬೆಚ್ಚಿಬಿದ್ದಿದ್ದಾರೆ.

ಅಧಿಕಾರಿಗಳ ತಪ್ಪಿನಿಂದಾಗಿ ಶಿವಗಂಗವ್ವ ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಸಮಸ್ಯೆ ಉಂಟಾಗಿದ್ದು, ಅವರಿಗೆ ದೊರೆಯುತ್ತಿದ್ದ ವೃದ್ಧಾಪ್ಯ ವೇತನ ಹಾಗೂ ಪತಿಯ ಪಿಂಚಣಿ ಹಣವೂ ಸ್ಥಗಿತಗೊಂಡಿದೆ. ಇದರಿಂದ ಜೀವನ ನಿರ್ವಹಣೆಯೇ ಕಷ್ಟಕರವಾಗಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ವಿಷಯ ತಿಳಿದ ಬಳಿಕ ಶಿವಗಂಗವ್ವ ಹಾಗೂ ಕುಟುಂಬದವರು ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಆರಂಭದಲ್ಲಿ ಸೂಕ್ತ ಸ್ಪಂದನೆ ದೊರಕಿಲ್ಲ ಎನ್ನಲಾಗಿದೆ. ಬಳಿಕ ಅಧಿಕಾರಿಗಳು ಒಂದೇ ವಾರದಲ್ಲಿ ಎರಡು ಮರಣ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದು, ಮೊದಲು ಮಗಳ ಹೆಸರಿನಲ್ಲಿ ಹಾಗೂ ನಂತರ ತಾಯಿಯ ಹೆಸರಿನಲ್ಲಿ ಪ್ರಮಾಣ ಪತ್ರ ನೀಡಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಅಧಿಕಾರಿಗಳ ಈ ಎಡವಟ್ಟಿನ ವಿರುದ್ಧ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವೃದ್ಧೆಗೆ ನ್ಯಾಯ ಒದಗಿಸುವುದರ ಜೊತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!