ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಶಿಕ್ಷಕರನ್ನು ಬೋಧನೆಗೆ ಸಂಬಂಧಿಸದ ವಿವಿಧ ಸರ್ಕಾರಿ ಕಾರ್ಯಗಳಿಂದ ಮುಕ್ತಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪದೋನ್ನತಿ ಪಡೆದ ಮುಖ್ಯೋಪಾಧ್ಯಾಯರು ಹಾಗೂ ಕರ್ನಾಟಕ ರಾಜ್ಯ ಪದವಿ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರು ಬಿಸಿಯೂಟ ಯೋಜನೆಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿ, ಹಾಲು ಹಾಗೂ ಮೊಟ್ಟೆ ವಿತರಣೆ, ಬಿಎಲ್ಒ ಕಾರ್ಯ, ಜಾನುವಾರು ಗಣತಿ ಸೇರಿದಂತೆ ವಿವಿಧ ಇಲಾಖೆಗಳ ಹೆಚ್ಚುವರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಬೋಧನಾ ಚಟುವಟಿಕೆಗಳಿಗೆ ಸಮಯದ ಕೊರತೆ ಉಂಟಾಗುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಅಡಚಣೆಗಳು ಎದುರಾಗುತ್ತಿದ್ದು, ಶಿಕ್ಷಕರನ್ನು ಅನ್ಯ ಕಾರ್ಯಗಳಿಂದ ಮುಕ್ತಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಶಿಕ್ಷಕರು ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ಪ್ರಮುಖ ಶಕ್ತಿಯಾಗಿದ್ದು, ಅವರ ಸಂಪೂರ್ಣ ಗಮನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವತ್ತ ಇರಬೇಕು. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶಿಕ್ಷಕರಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಂಕನೂರ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಶೈಕ್ಷಣಿಕ ಪ್ರಗತಿಗೆ ಮುಖ್ಯೋಪಾಧ್ಯಾಯರು ತಮ್ಮ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಂಡದ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಫ್. ಪೂಜಾರ ಮಾತನಾಡಿ, ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗಳನ್ನು ವಿಧಾನ ಪರಿಷತ್ತಿನಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವ ಮೂಲಕ ಪರಿಹಾರಕ್ಕೆ ಶ್ರಮಿಸುತ್ತಿರುವ ಎಸ್.ವಿ. ಸಂಕನೂರ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಸ್. ಮಸನಾಯಕ ಮಾತನಾಡಿ, ಸಂಘಟನೆಯ ಪದಾಧಿಕಾರಿಗಳು ಹಾಗೂ ಪದೋನ್ನತಿ ಪಡೆದ ಮುಖ್ಯೋಪಾಧ್ಯಾಯರು ಶಿಸ್ತು, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವಿ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕಕ್ಕೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ, ಕಾರ್ಯಾಧ್ಯಕ್ಷ ಮಂಜುನಾಥ ಸಿ. ಕೊಕ್ಕರಗುಂದಿ, ಉಪಾಧ್ಯಕ್ಷೆ ಅಮನ್ ಎಸ್. ಗುಳೇದಗುಡ್ಡ, ಖಜಾಂಚಿ ಮಲ್ಲಿಕಾರ್ಜುನ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ಬೆಳವಗಿ ಸೇರಿದಂತೆ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಅದೇ ರೀತಿ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ ಕೆ.ಎ. ಉಪ್ಪಿನ, ಗಿರೀಶ ದಾಸರ, ಜ್ಯೋತಿ ಶೆಟ್ಟರ, ಸಂಜೀವಿನಿ ಕಲಗುಡಿ, ಎಸ್.ಜಿ. ಕೋಲಕಾರ, ಎಸ್.ಎ. ಸಲೋಡ, ಶಾರದಾ ಮುಳಗುಂದಮಠ, ಸಂಜೋತಾ ಪಾಟೀಲ ಹಾಗೂ ವಿಜಯಲಕ್ಷ್ಮಿ ಭಜಂತ್ರಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಸ್.ಬಿ. ಹಾವೇರಿ, ಬಿ.ಎಸ್. ಗಿರಿತಮ್ಮಣ್ಣವರ, ಈರಣ್ಣ ಹಾದಿಮನಿ, ಉಪನ್ಯಾಸಕರಾದ ಎಸ್.ಐ. ಮೇಟಿ, ಶ್ರೀಶೈಲ ಬೀರಕಬ್ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಾ. ಅಶೋಕ ಅಂಗಡಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಎ.ಎಸ್. ಪಾಟೀಲ ವಂದಿಸಿದರು.
“ಶಿಕ್ಷಕರ ಸಮಯ ಮತ್ತು ಶಕ್ತಿಯು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕೆ ಮೀಸಲಾಗಬೇಕು. ಬೋಧನಾ ಕಾರ್ಯಕ್ಕೆ ಅಡ್ಡಿಯಾಗುವ ಅನ್ಯ ಇಲಾಖೆಗಳ ಹೊಣೆಗಾರಿಕೆಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿದಾಗ ಮಾತ್ರ ಶಿಕ್ಷಣದ ಗುಣಮಟ್ಟ ಮತ್ತಷ್ಟು ಉತ್ತಮಗೊಳ್ಳಲಿದೆ.”
— ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ



