ಪ್ಯಾರಿಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಾಂತ, ಸಂಯಮಶೀಲ ಹಾಗೂ ನಿರ್ಧಾರ ತೆಗೆದುಕೊಳ್ಳುವಲ್ಲಿ ಅತ್ಯಂತ ದೃಢ ನಾಯಕ ಎಂದು ಬಣ್ಣಿಸಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದರು.
“ನನ್ನ ಸ್ವಭಾವ ಎಲ್ಲರಿಗೂ ಗೊತ್ತಿದೆ. ಆದರೆ ಮೋದಿ ಅವರು ಹೊರಗಿನಿಂದ ನೋಡಲು ತುಂಬಾ ಶಾಂತವಾಗಿ ಹಾಗೂ ಸಮಚಿತ್ತದಿಂದ ಕಾಣಿಸುತ್ತಾರೆ. ಆದರೆ ನಿರ್ಧಾರ ತೆಗೆದುಕೊಳ್ಳುವಾಗ ಅತ್ಯಂತ ದೃಢವಾಗಿ ನಡೆದುಕೊಳ್ಳುತ್ತಾರೆ” ಎಂದು ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ ಭಾರತ-ಅಮೆರಿಕ ಸಂಬಂಧಗಳ ಕುರಿತು ಮಾತನಾಡಿದ ಅವರು, ತಾವು ಅಧ್ಯಕ್ಷರಾಗಿರುವವರೆಗೆ ಭಾರತಕ್ಕೆ ಶ್ವೇತಭವನದಲ್ಲಿ ಉತ್ತಮ ಸ್ನೇಹಿತನಿರುವುದಾಗಿ ಹೇಳಿದರು.
“ಇಲ್ಲಿರುವ ಪ್ರತಿಯೊಬ್ಬರೂ ಭಾರತವನ್ನು ಪ್ರೀತಿಸುತ್ತಾರೆ. ಮೋದಿ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ. ವೈಯಕ್ತಿಕವಾಗಿಯೂ ಹಾಗೂ ಎರಡು ದೇಶಗಳ ನಡುವೆಯೂ ಅತ್ಯಂತ ಆತ್ಮೀಯ ಬಾಂಧವ್ಯವಿದೆ” ಎಂದು ಟ್ರಂಪ್ ತಿಳಿಸಿದರು.
ಭಾರತದ ಮೇಲೆ ಯಾವುದೇ ದಾಳಿ ನಡೆದರೂ ಅಮೆರಿಕ ಬೆಂಬಲವಾಗಿ ನಿಲ್ಲಲಿದೆ ಹಾಗೂ ಅಗತ್ಯ ನೆರವು ನೀಡಲಿದೆ ಎಂಬ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು.



