ವಿಜಯಸಾಕ್ಷಿ ಸುದ್ದಿ, ಗದಗ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೂನ್ 21ರಂದು ಅಂಚಿಪುರ ಗ್ರಾಮದಿಂದ ಹೊಸೂರು ಗ್ರಾಮದವರೆಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ರೈತ ಹೋರಾಟದಲ್ಲಿ ಜಿಲ್ಲೆಯ ರೈತ ಮುಖಂಡರು ಹಾಗೂ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜೆಡಿಎಸ್ ಮುಖಂಡ ವೆಂಕನಗೌಡ ಗೋವಿಂದಗೌಡ್ರು ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರೂಪುಗೊಂಡಿತ್ತು. ಆದರೆ ಈಗಿನ ಸರ್ಕಾರ ಅದನ್ನು ಸಂಪೂರ್ಣವಾಗಿ ರಿಯಲ್ ಎಸ್ಟೇಟ್ ಯೋಜನೆಯಾಗಿ ಪರಿವರ್ತಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಈಗಿನ ಯೋಜನೆಗೂ ಕುಮಾರಸ್ವಾಮಿ ಅವರ ಯೋಜನೆಗೂ ಯಾವುದೇ ಸಂಬಂಧವಿಲ್ಲ. ಆದರೂ ಯೋಜನೆಯನ್ನು ಕುಮಾರಸ್ವಾಮಿ ಅವರೊಂದಿಗೆ ತಳುಕು ಹಾಕಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ವ್ಯಾಪ್ತಿಗೆ ಒಳಪಡುವ 514 ರೈತರ ಪೈಕಿ 480 ರೈತರು ಭೂಮಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಸರ್ಕಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಬಾಕಿ ಇರುವಾಗ ರೈತರ ಭೂಮಿ ಕಸಿದುಕೊಳ್ಳುವ ಪ್ರಯತ್ನ ನಡೆಯಬಾರದು. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯ ಬೀಜ ಮತ್ತು ಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ಕುರಿತ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜನರು ಗ್ಯಾರಂಟಿ ಯೋಜನೆಗಳನ್ನು ನಂಬಿಯೇ ಮತ ನೀಡಿದ್ದಾರೆ. ಹೀಗಾಗಿ ಯಾವುದೇ ಬದಲಾವಣೆ ಮಾಡದೆ ಯೋಜನೆಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಜೂನ್ 21ರಂದು ನಡೆಯಲಿರುವ ರೈತ ಹೋರಾಟದಲ್ಲಿ ಗದಗ ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ರೈತರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಅಪ್ಪಣ್ಣವರ, ಜಿ.ಕೆ. ಕೊಳ್ಳಿಮಠ, ಪ್ರಫುಲ್ ಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಬಿಡದಿ ಟೌನ್‌ಶಿಪ್ ಯೋಜನೆಯಿಂದ ರೈತರ ಭೂಮಿಗೆ ಅನ್ಯಾಯವಾಗಬಾರದು. ರೈತರ ಹಕ್ಕುಗಳ ರಕ್ಷಣೆಗೆ ಜೂನ್ 21ರ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.”
ವೆಂಕನಗೌಡ ಗೋವಿಂದಗೌಡ್ರು, ಜೆಡಿಎಸ್ ಮುಖಂಡ
ಕುಮಾರಸ್ವಾಮಿ ವಿರುದ್ಧದ ಹೇಳಿಕೆಗಳು ಖಂಡನೀಯ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದೇ ವ್ಯಕ್ತಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಆದರೆ ಕೆಲವು ಸ್ಥಳೀಯ ನಾಯಕರು ಅವರ ಹೆಸರನ್ನು ಬಳಸಿಕೊಂಡು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದು, ಇಂತಹ ಹೇಳಿಕೆಗಳು ಖಂಡನೀಯ ಎಂದು ವೆಂಕನಗೌಡ ಗೋವಿಂದಗೌಡ್ರು ಹೇಳಿದರು.



