ಮಂಡ್ಯ: ರೈತರ ವಾಹನಗಳಿಂದ ಟೋಲ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ರಾಜ್ಯದ ಟೋಲ್ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಜೂನ್ 23ರಂದು ರಾಜ್ಯಾದ್ಯಂತ ಟೋಲ್ ಬೂತ್‌ಗಳ ಮುಂದೆ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿವೆ.
ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೃಷಿ ಉತ್ಪನ್ನ ಸಾಗಿಸುವ ವಾಹನಗಳ ಮೇಲೆ ಟೋಲ್ ವಿಧಿಸುವುದು ರೈತರ ಬದುಕಿನ ಮೇಲೆ ಹೆಚ್ಚುವರಿ ಹೊರೆ ಹಾಕಿದಂತಾಗಿದೆ ಎಂದು ಆರೋಪಿಸಿದರು. ರೈತರು ಈಗಾಗಲೇ ಇಂಧನ, ರಸಗೊಬ್ಬರ, ಕಾರ್ಮಿಕ ವೆಚ್ಚಗಳ ಒತ್ತಡ ಎದುರಿಸುತ್ತಿದ್ದು, ಟೋಲ್ ಸುಂಕ ಮತ್ತೊಂದು ಹೊರೆ ಆಗಿದೆ ಎಂದು ಹೇಳಿದರು.
ವಾಹನ ಮಾಲೀಕರು ರಸ್ತೆ ತೆರಿಗೆಯನ್ನು ಪಾವತಿಸಿದ ನಂತರ ಮತ್ತೆ ಟೋಲ್ ಹೆಸರಿನಲ್ಲಿ ಹಣ ಸಂಗ್ರಹಿಸುವುದು ನ್ಯಾಯಸಮ್ಮತವಲ್ಲ. ಆದ್ದರಿಂದ ರೈತರ ವಾಹನಗಳಿಗೆ ಸಂಪೂರ್ಣ ವಿನಾಯಿತಿ ಘೋಷಿಸಬೇಕು ಹಾಗೂ ರಾಜ್ಯದ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಪಂಜಾಬ್‌ನಲ್ಲಿ ಜಾರಿಯಲ್ಲಿರುವ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು. ಅಲ್ಲದೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಕಬ್ಬಿನ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ರೈತ ಸಂಘಟನೆಗಳು ನೀಡಿವೆ.



