ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಂಬಂಧಿಸಿದ ಕಾನೂನು ಹೋರಾಟ ಹೊಸ ತಿರುವು ಪಡೆದಿದೆ. ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮಹತ್ವದ ಅರ್ಜಿಯ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸುನೀಲ್ ಅವರು ಪ್ರಕರಣದಿಂದ ಹಿಂದೆ ಸರಿಯಲು ಮನವಿ ಸಲ್ಲಿಸಿದ್ದು, ನ್ಯಾಯಾಂಗ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರೇಣುಕಾಸ್ವಾಮಿ ಅವರ ತಾಯಿಯನ್ನು ಮರು ಪಾಟೀಸವಾಲಿಗೆ ಒಳಪಡಿಸಲು ಅವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ವಕೀಲ ಸುನೀಲ್, ಹೈಕೋರ್ಟ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರಿಂದ ಯಾವುದೇ ಸ್ಪಷ್ಟ ಸೂಚನೆ ಪಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಕಾರಣದಿಂದ ವಾದ ಮಂಡನೆಯಿಂದ ನಿವೃತ್ತಿಯಾಗಲು ಹಾಗೂ ಮುಂದಿನ ಕಾನೂನು ಕ್ರಮಗಳಿಗೆ ಸಮಯ ನೀಡುವಂತೆ ಕೋರಿದರು.
ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿದೆ. ಅಂದು ದರ್ಶನ್ ಪರ ಹೊಸ ವಕೀಲರು ಹಾಜರಾಗಲಿದ್ದಾರೆಯೇ ಅಥವಾ ಹಾಲಿ ವಕೀಲರೇ ಮುಂದುವರಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಇನ್ನೊಂದೆಡೆ, ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯವೆಂದು ಪರಿಗಣಿಸಲಾಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್‌ಡ್ರೈವ್‌ಗೆ ಸೆಷನ್ಸ್ ನ್ಯಾಯಾಲಯ ಮಾನ್ಯತೆ ನೀಡಿದೆ. ತನಿಖಾಧಿಕಾರಿಗಳು ಸಲ್ಲಿಸಿದ್ದ ಡಿಜಿಟಲ್ ಸಾಕ್ಷ್ಯಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ, ಪೆನ್‌ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಪರಿಗಣಿಸಲಾಗಿದೆ.
ಮಂಗಳವಾರದ ವಿಚಾರಣೆ ವೇಳೆ ದರ್ಶನ್ ಸೇರಿದಂತೆ ಇತರೆ ಆರೋಪಿಗಳು, ಸಾಕ್ಷ್ಯ ಕಾಯ್ದೆಯ ನಿಯಮಾನುಸಾರ ಪ್ರಮಾಣೀಕರಣವಿಲ್ಲದೆ ಡಿಜಿಟಲ್ ಸಾಕ್ಷ್ಯ ಸ್ವೀಕರಿಸಲಾಗುವುದಿಲ್ಲ ಎಂದು ಆಕ್ಷೇಪಿಸಿದ್ದರು. ಆದರೆ ಬುಧವಾರ ಅಗತ್ಯ ದಾಖಲೆಗಳು ಸಲ್ಲಿಕೆಯಾಗುತ್ತಿದ್ದಂತೆ ನ್ಯಾಯಾಲಯ ಪೆನ್‌ಡ್ರೈವ್‌ಗೆ ಕಾನೂನು ಮಾನ್ಯತೆ ನೀಡಿದೆ.
ಇದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಡಿಜಿಟಲ್ ಸಾಕ್ಷ್ಯಗಳ ಪಾತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಮುಂದಿನ ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.



