ಕೇರಳ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದೆ ಎಂಬ ಕಾರಣಕ್ಕೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಕ್ಷಣ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಇಂಧನ ದರವನ್ನು ಪ್ರತಿ ಲೀಟರ್ಗೆ ₹3.94 ಹೆಚ್ಚಿಸಲಾಗಿದ್ದು, ಅದರ ಪರಿಣಾಮ ಜನಸಾಮಾನ್ಯರ ಮೇಲೆ ಬೀರಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕುಸಿದ ತಕ್ಷಣವೇ ಅದರ ಲಾಭ ದೇಶೀಯ ಮಾರುಕಟ್ಟೆಗೆ ತಲುಪುವುದಿಲ್ಲ ಎಂದು ಹೇಳಿದರು.
ಅಗ್ಗದ ದರದಲ್ಲಿ ಖರೀದಿಸಲಾದ ಕಚ್ಚಾ ತೈಲ ಭಾರತಕ್ಕೆ ತಲುಪಲು ಸಮಯ ಬೇಕಾಗುತ್ತದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಸಂಚಾರದಲ್ಲಿ ದಟ್ಟಣೆ ಇರುವುದರಿಂದ ಪೂರೈಕೆ ಸರಪಳಿ ಸಾಮಾನ್ಯ ಸ್ಥಿತಿಗೆ ಮರಳಲು ಸ್ವಲ್ಪ ಕಾಲಾವಕಾಶ ಅಗತ್ಯವಿದೆ ಎಂದು ವಿವರಿಸಿದರು.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ಬಳಿಕ ತೈಲ ಕಂಪನಿಗಳು ಸಾಕಷ್ಟು ಆರ್ಥಿಕ ಒತ್ತಡ ಎದುರಿಸಿವೆ. ಈ ಸಂಕಷ್ಟವನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸಿದ್ದು, ಸುಮಾರು ₹12,000 ಕೋಟಿ ನಷ್ಟವನ್ನೂ ಭರಿಸಿದೆ. ಇಂಧನ ದರ ಏರಿಳಿತದ ನಡುವೆಯೂ ಹಲವು ರಾಜ್ಯಗಳು ತಮ್ಮ ತೆರಿಗೆ ಆದಾಯದಲ್ಲಿ ಯಾವುದೇ ಕಡಿತ ಮಾಡಿಲ್ಲ ಎಂದು ಅವರು ತಿಳಿಸಿದರು.
ಕೇರಳದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಗೋಪಿ, ಇದು ಸಾಮಾನ್ಯ ಯೋಜನೆಯಲ್ಲ; ನಿಗದಿತ ನಿಯಮ ಮತ್ತು ಪ್ರಕ್ರಿಯೆಗಳ ಮೂಲಕವೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯ ಸರ್ಕಾರವು ಏಮ್ಸ್ಗೆ ಸೂಕ್ತವೆಂದು ಗುರುತಿಸಿರುವ ಸ್ಥಳಗಳ ವಿವರವನ್ನು ಸಂಬಂಧಿತ ಸಮಿತಿಗೆ ಸಲ್ಲಿಸಬೇಕು. ಬಳಿಕ ಪರಿಶೀಲನೆ ನಡೆಸಿ ಅಂತಿಮ ಸ್ಥಳದ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಕುರಿತು ಕೇರಳ ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ಆದರೆ ಈವರೆಗೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಸಚಿವರು ಹೇಳಿದ್ದಾರೆ.



