ವಿಜಯಸಾಕ್ಷಿ ಸುದ್ದಿ, ಧಾರವಾಡ: ನವೋದಯ ಪ್ರವೇಶ ಪರೀಕ್ಷೆ ತರಬೇತಿಯಲ್ಲಿ ರಾಜ್ಯದ ಗಮನ ಸೆಳೆದಿರುವ ಧಾರವಾಡದ ಕ್ರಿಯೇಟಿವ್ ಅಕಾಡೆಮಿ, 2025-26ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲೂ ಗಮನಾರ್ಹ ಸಾಧನೆ ದಾಖಲಿಸಿದೆ. ಕಳೆದ 17 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಅನೇಕ ವಿದ್ಯಾರ್ಥಿಗಳನ್ನು ನವೋದಯ ಹಾಗೂ ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಮಾಡಿಸುತ್ತಿರುವ ಸಂಸ್ಥೆ, ಈ ಬಾರಿಯೂ ತನ್ನ ಯಶಸ್ಸಿನ ಪರಂಪರೆಯನ್ನು ಮುಂದುವರಿಸಿದೆ.
ಇತ್ತೀಚೆಗೆ ಪ್ರಕಟವಾದ ಫಲಿತಾಂಶದಲ್ಲಿ ಕ್ರಿಯೇಟಿವ್ ಅಕಾಡೆಮಿಯ ಮೂವರು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ನವೋದಯ ಶಾಲೆಗೆ ಆಯ್ಕೆಯಾಗುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ವಿದ್ಯಾರ್ಥಿ ಮೇಘರಾಜ ಗಾಳಿ ಶೇ.96.25 ಅಂಕಗಳನ್ನು ಪಡೆದು ಕೊಪ್ಪಳ ಜಿಲ್ಲೆಯಲ್ಲಿ 25ನೇ ರ‍್ಯಾಂಕ್ ಗಳಿಸಿದ್ದು, ಸಂಸ್ಥೆಯ ಹೆಮ್ಮೆಗೆ ಕಾರಣರಾಗಿದ್ದಾರೆ. ವಿದ್ಯಾರ್ಥಿನಿ ಅಮೃತಾ ಸಜ್ಜನರ ಶೇ.93.75 ಅಂಕಗಳನ್ನು ಪಡೆದು ಗದಗ ಜಿಲ್ಲೆಯಲ್ಲಿ 67ನೇ ರ‍್ಯಾಂಕ್ ಗಳಿಸಿದ್ದರೆ, ಸಂಗಮೇಶ ಚೌದರಿ ಶೇ.91.25 ಅಂಕಗಳೊಂದಿಗೆ ಧಾರವಾಡ ಜಿಲ್ಲೆಯಲ್ಲಿ 117ನೇ ರ‍್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ.
ಸಂಸ್ಥೆಯ ಈ ಫಲಿತಾಂಶ ವಿದ್ಯಾರ್ಥಿಗಳ ಶ್ರಮ, ಪಾಲಕರ ಸಹಕಾರ ಹಾಗೂ ಶಿಕ್ಷಕರ ಸಮರ್ಪಿತ ಮಾರ್ಗದರ್ಶನದ ಪ್ರತಿಫಲವಾಗಿದೆ ಎಂದು ಶಿಕ್ಷಣ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕ್ರಿಯೇಟಿವ್ ಅಕಾಡೆಮಿ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಸಾಧನೆಗೈದ ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ತರಬೇತಿ ನೀಡಿದ ಶಿಕ್ಷಕರನ್ನು ಕ್ರಿಯೇಟಿವ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಡಾ. ರಮೇಶ ಉಳ್ಳಾಗಡ್ಡಿ ಅಭಿನಂದಿಸಿ, ಮುಂದಿನ ಶೈಕ್ಷಣಿಕ ಪಯಣಕ್ಕೂ ಶುಭ ಹಾರೈಸಿದ್ದಾರೆ.
“ವಿದ್ಯಾರ್ಥಿಗಳ ಸಾಧನೆಯೇ ನಮ್ಮ ಸಂಸ್ಥೆಯ ನಿಜವಾದ ಸಂಪತ್ತು. ಗುಣಮಟ್ಟದ ತರಬೇತಿ ಮತ್ತು ನಿರಂತರ ಮಾರ್ಗದರ್ಶನದ ಮೂಲಕ ಇನ್ನಷ್ಟು ವಿದ್ಯಾರ್ಥಿಗಳನ್ನು ಉನ್ನತ ಸಾಧನೆಯತ್ತ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ.”
– ಡಾ. ರಮೇಶ ಉಳ್ಳಾಗಡ್ಡಿ, ಸಂಸ್ಥಾಪಕ ಅಧ್ಯಕ್ಷರು, ಕ್ರಿಯೇಟಿವ್ ಅಕಾಡೆಮಿ



