ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಅಂತರ ಜಿಲ್ಲಾ ಮನೆಕಳ್ಳರನ್ನು ಬಂಧಿಸಿ, ₹5.12 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸಿದ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.
ನವಲಗುಂದ ಪೊಲೀಸ್ ಠಾಣೆಯ ಗುನ್ನಾ ನಂ. 86/2026 ಕಲಂ 331(1), 305 ಬಿಎನ್‌ಎಸ್ ಪ್ರಕರಣದಲ್ಲಿ ಮೇ 31ರಂದು ಪಿರ್ಯಾದಿದಾರ ಅಲ್ಲಾಗೌಡ ತಂದೆ ಹನಮಂತಗೌಡ ಬಾಲನಗೌಡ್ರ, ವಯಸ್ಸು 42 ವರ್ಷ, ಅಮರಗೋಳ ತಾ. ರೋಣ, ಹಾಲಿ ವಾಸ್ತಿ ನವಲಗುಂದ ಬಸ್ತಿ ಪ್ಲಾಟ್ ನಿವಾಸಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ತಕ್ಷಣ ನವಲಗುಂದ ಸಿಪಿಐ ರವಿಕುಮಾರ ಕಪ್ಪತನವರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿತ್ತು. ತನಿಖಾ ತಂಡದಲ್ಲಿ ಜನಾರ್ಧನ ಬಿ., ಉಮಾದೇವಿ ಸೇರಿದಂತೆ ಸಿಬ್ಬಂದಿಯನ್ನು ಒಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.
ನವಲಗುಂದ ಪಟ್ಟಣ ಹಾಗೂ ಹೊರವಲಯದ ವಿವಿಧ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಆರೋಪಿಗಳ ಜಾಡು ಪತ್ತೆ ಹಚ್ಚಲಾಯಿತು. ಬಳಿಕ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಬೆಳಗಾವಿ ಜಿಲ್ಲೆಯವರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿತರಿಂದ 46 ಗ್ರಾಂ ಬಂಗಾರದ ಆಭರಣಗಳು, ಅಂದಾಜು ₹5,12,000 ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಗುಂಜನ್ ಆರ್ಯ, ಶಿವಾನಂದ ಕಟಗಿ ಹಾಗೂ ವಿನೋದ ಮುಕ್ತೇದಾರ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ತನಿಖಾ ತಂಡದಲ್ಲಿ ಎಸ್.ಡಿ. ಮಲ್ಲನಗೌಡ್ರ (ಎಎಸ್‌ಐ), ಸುರೇಶ ಹುರಳಿ, ಎಂ.ಎಚ್. ನಾಗಾವಿ, ಮುತ್ತು ಭಜಂತ್ರಿ, ಸದಾಶಿವ ಮಳ್ಳೂರ, ಸಂತೋಷ ಸಿಂಗಣ್ಣವರ, ಸಿ.ಎಸ್. ಮಠಪತಿ, ಗೂಳಪ್ಪ ಜಗಲಿ, ಧಾರವಾಡ ಜಿಲ್ಲಾ ತಾಂತ್ರಿಕ ಸಿಬ್ಬಂದಿಗಳಾದ ವಿಠ್ಠಲ ಡಂಗನ್ನವರ ಹಾಗೂ ರವಿ ಪಟ್ಟೇದ ಭಾಗವಹಿಸಿದ್ದರು.
ಪ್ರಕರಣವನ್ನು ಭೇದಿಸಿ ಕಳುವಾದ ಆಸ್ತಿಯನ್ನು ವಶಪಡಿಸಿಕೊಂಡ ನವಲಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.



