ವಿಜಯಸಾಕ್ಷಿ ಸುದ್ದಿ, ಧಾರವಾಡ: ಮುಂಗಾರು ಮಳೆಯ ತೀವ್ರತೆ ಹೆಚ್ಚುತ್ತಿರುವ ನಡುವೆಯೂ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಕೊರತೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ 21 ಗ್ರಾಮಗಳಿಗೆ 25 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಜಿಲ್ಲೆಯ ಯಾವುದೇ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಎದುರಾಗಿಲ್ಲ. ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಮಲಪ್ರಭಾ ಜಲಾಶಯದಿಂದ 60 ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಲಾಗಿದ್ದು, ಜನ-ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗಿದೆ.
ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ 100 ವಾರ್ಡ್‌ಗಳಲ್ಲಿಯೂ ನೀರಿನ ಲಭ್ಯತೆ ಸಮರ್ಪಕವಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 13 ವಾರ್ಡ್‌ಗಳಲ್ಲಿ 24×7 ನೀರು ಪೂರೈಕೆ ವ್ಯವಸ್ಥೆ ಜಾರಿಯಲ್ಲಿದ್ದು, ಉಳಿದ ವಾರ್ಡ್‌ಗಳಿಗೂ ನಿಯಮಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ 2.33 ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ 45 ವಾರಗಳಷ್ಟು ಮೇವು ಲಭ್ಯವಿದ್ದು, ಮೇವಿನ ಕೊರತೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜೂನ್ 1ರಿಂದ 11ರವರೆಗೆ ಜಿಲ್ಲೆಯಲ್ಲಿ 66.4 ಮಿ.ಮೀ. ಮಳೆ ದಾಖಲಾಗಿದ್ದು, ವಾಡಿಕೆ ಮಳೆಯಾದ 40.6 ಮಿ.ಮೀ.ಗೆ ಹೋಲಿಸಿದರೆ ಶೇ.64ರಷ್ಟು ಅಧಿಕ ಮಳೆಯಾಗಿದೆ.
ಗುಡುಗು-ಸಿಡಿಲು ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಹಾಗೂ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ₹6.60 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
“ಮುಂಗಾರು ಹಂಗಾಮಿನಲ್ಲಿ ಕುಡಿಯುವ ನೀರು, ಮೇವು ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.”
ಸ್ನೇಹಲ್ ಆರ್., ಜಿಲ್ಲಾಧಿಕಾರಿ, ಧಾರವಾಡ



