ಮೈಸೂರು/ಶಿವಮೊಗ್ಗ: ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಈಗ ವಯಸ್ಸಿನ ಮಿತಿಯನ್ನು ಮೀರಿ ಮಕ್ಕಳ ಹಾಗೂ ಯುವಕರ ಜೀವವನ್ನೇ ಕಸಿಯುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರು ಹಾಗೂ ಶಿವಮೊಗ್ಗದಲ್ಲಿ ಮೊದಲನೇ ತರಗತಿ ಬಾಲಕನೊಬ್ಬರು ಹಠಾತ್ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ.
ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿ ಮಾದೇಶ್ ಕಾಲೇಜು ಆವರಣದಲ್ಲೇ ಏಕಾಏಕಿ ಹೃದಯಾಘಾತಕ್ಕೊಳಗಾಗಿ ಕುಸಿದುಬಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಾದೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಆರು ವರ್ಷದ ತ್ರಿಲೋಕ್ ಜೈನ್ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿದ್ದಾನೆ. ಶಿಕ್ಷಕರು ಮತ್ತು ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಬಾಲಕ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ.
ವೈದ್ಯರ ಪ್ರಾಥಮಿಕ ಅಂದಾಜಿನ ಪ್ರಕಾರ ಎರಡೂ ಪ್ರಕರಣಗಳಲ್ಲಿ ಹೃದಯಾಘಾತದ ಸಾಧ್ಯತೆ ಕುರಿತು ಶಂಕೆ ವ್ಯಕ್ತವಾಗಿದ್ದು, ಅಂತಿಮ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. ಕಿರಿಯ ವಯಸ್ಸಿನವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವುದು ವೈದ್ಯಕೀಯ ವಲಯ ಹಾಗೂ ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ.
ಮೈಸೂರಿನ ದೇವರಾಜ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಜಿಲ್ಲೆಯ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಮತ್ತು ವೈದ್ಯಕೀಯ ತನಿಖೆ ಪ್ರಗತಿಯಲ್ಲಿದೆ.



