HomeCrime Newsಆನ್ ಲೈನ್ ಟ್ರೇಡಿಂಗ್ ಹೆಸರಿನಲ್ಲಿ ₹20 ಲಕ್ಷ ದರೋಡೆ; ಸಿಐಡಿ ಇನ್ಸ್ಪೆಕ್ಟರ್ ಸೇರಿ ಮೂವರ ಬಂಧನ

ಆನ್ ಲೈನ್ ಟ್ರೇಡಿಂಗ್ ಹೆಸರಿನಲ್ಲಿ ₹20 ಲಕ್ಷ ದರೋಡೆ; ಸಿಐಡಿ ಇನ್ಸ್ಪೆಕ್ಟರ್ ಸೇರಿ ಮೂವರ ಬಂಧನ

For Dai;y Updates Join Our whatsapp Group

Spread the love

ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಕೇರಳ ಮೂಲದ ಯುವಕರನ್ನು ಬೆಂಗಳೂರಿಗೆ ಕರೆಸಿ, ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ 20 ಲಕ್ಷ ರೂಪಾಯಿಗೂ ಅಧಿಕ ಹಣ ದೋಚಿದ ಪ್ರಕರಣದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಕುಪೇಂದ್ರ ರೆಡ್ಡಿ ಹಾಗೂ ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 50 ಲಕ್ಷ ರೂಪಾಯಿ ಲಾಭ ಸಿಗುತ್ತದೆ ಎಂದು ಕೇರಳದ ಕೆಲ ಯುವಕರಿಗೆ ಆಮಿಷ ಒಡ್ಡಲಾಗಿತ್ತು. ಈ ಆಮಿಷಕ್ಕೆ ಒಳಗಾದ ಯುವಕರು ಹಣದೊಂದಿಗೆ ಬೆಂಗಳೂರಿನ ಮಡಿವಾಳದಲ್ಲಿರುವ ಖಾಸಗಿ ಹೋಟೆಲ್‌ಗೆ ಆಗಮಿಸಿದ್ದರು.

ಯುವಕರು ಹೋಟೆಲ್‌ಗೆ ಬಂದಿರುವ ಮಾಹಿತಿ ಪಡೆದ ಆರೋಪಿಗಳು ಬಳಿಕ ಪೊಲೀಸ್ ಅಧಿಕಾರಿಗಳಂತೆ ನಟಿಸಿ ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸ್ ವಾಹನದಲ್ಲಿ ಬಂದ ಆರೋಪಿಗಳು ತಮ್ಮನ್ನು ಅಧಿಕಾರಿಗಳೆಂದು ಪರಿಚಯಿಸಿಕೊಂಡು ಗುರುತಿನ ಚೀಟಿಗಳನ್ನು ತೋರಿಸಿ ಯುವಕರನ್ನು ಬೆದರಿಸಿದ್ದಾರೆ ಎನ್ನಲಾಗಿದೆ.

ಬಳಿಕ ಯುವಕರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ 20 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಸಿದುಕೊಂಡು ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ಪ್ರಮುಖ ಆರೋಪಿ ಹಣದೊಂದಿಗೆ ಪೊಲೀಸ್ ವಾಹನದಲ್ಲಿ ಸ್ಥಳದಿಂದ ತೆರಳಿದ್ದರೆ, ಉಳಿದವರು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕೇರಳ ಮೂಲದ ಯುವಕರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳ ವಿರುದ್ಧ ದರೋಡೆ, ಬೆದರಿಕೆ, ಹಲ್ಲೆ, ವಂಚನೆ ಹಾಗೂ ಒಳಸಂಚು ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಮಡಿವಾಳ ಉಪವಿಭಾಗದ ಎಸಿಪಿ ವಾಸುದೇವ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಆರೋಪಿಗಳು ಈ ಹಿಂದೆ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!