ಬೆಂಗಳೂರು: ಪೊಲೀಸರ ಕಣ್ಣು ತಪ್ಪಿಸಲು ಕಾರಿನ ಮೇಲೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಫೋಟೋ ಅಂಟಿಸಿಕೊಂಡು ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ. ಒಡಿಶಾದಿಂದ ಕೇರಳಕ್ಕೆ ಸಾಗಿಸಲಾಗುತ್ತಿದ್ದ ಬರೋಬ್ಬರಿ 317 ಕೆಜಿ ಗಾಂಜಾವನ್ನು ಕುಂಬಳಗೋಡು ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಒಡಿಶಾದಿಂದ ಟೊಯೋಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯೆ ಯಾರಿಗೂ ಅನುಮಾನ ಬಾರದಂತೆ ಹಾಗೂ ಪೊಲೀಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಕಾರಿನ ಮೇಲೆ ಭಗತ್ ಸಿಂಗ್ ಅವರ ಫೋಟೋ ಅಂಟಿಸಿಕೊಂಡಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಕಾರಿನ ಸೀಟ್‌ಗಳ ಒಳಗೆ, ಸೀಟ್‌ಗಳ ಕೆಳಗೆ ಹಾಗೂ ಇತರ ಗುಪ್ತ ಜಾಗಗಳಲ್ಲಿ ಗಾಂಜಾದ ಮೂಟೆಗಳನ್ನು ಅಡಗಿಸಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕುಂಬಳಗೋಡು ಪೊಲೀಸರು ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಸಾಗಾಟ ಬಯಲಾಗಿದೆ.
ಆರಂಭದಲ್ಲಿ ಕಾರಿನಲ್ಲಿ ಮೂರ್ನಾಲ್ಕು ಕೆಜಿ ಗಾಂಜಾ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದರು. ಆದರೆ ಕಾರಿನ ಒಳಭಾಗವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಮೂಟೆಗಟ್ಟಲೆ ಗಾಂಜಾ ಪತ್ತೆಯಾಗಿದೆ. ಒಟ್ಟು 317 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 1.50 ಕೋಟಿ ರೂಪಾಯಿಯಿಂದ 1.70 ಕೋಟಿ ರೂಪಾಯಿವರೆಗೆ ಇರಬಹುದು ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷ್ಣುಮಣಿ (30) ಹಾಗೂ ಚಾನ್ ಪಾಷಾ (31) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಲಾಗಿದ್ದ ಇನೋವಾ ಕ್ರಿಸ್ಟಾ ಕಾರನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಕುಂಬಳಗೋಡು ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಒಡಿಶಾದಿಂದ ಗಾಂಜಾ ಪೂರೈಕೆ ಮಾಡುತ್ತಿದ್ದವರು ಯಾರು? ಕೇರಳದಲ್ಲಿ ಯಾರಿಗೆ ತಲುಪಿಸಲು ಯೋಜಿಸಲಾಗಿತ್ತು? ಈ ಅಕ್ರಮ ಜಾಲದಲ್ಲಿ ಇನ್ನೂ ಯಾರಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.



