HomeKarnataka Newsಕಬ್ಬಿಗೆ ಟನ್ಗೆ ₹5,500 ಕೊಡಿ, ಇಲ್ಲದಿದ್ದರೆ ಹೋರಾಟ ನಿಲ್ಲಲ್ಲ: ಬೆಳಗಾವಿ–ಧಾರವಾಡದಲ್ಲಿ ರೈತರ ಆಕ್ರೋಶ ಸ್ಫೋಟ

ಕಬ್ಬಿಗೆ ಟನ್ಗೆ ₹5,500 ಕೊಡಿ, ಇಲ್ಲದಿದ್ದರೆ ಹೋರಾಟ ನಿಲ್ಲಲ್ಲ: ಬೆಳಗಾವಿ–ಧಾರವಾಡದಲ್ಲಿ ರೈತರ ಆಕ್ರೋಶ ಸ್ಫೋಟ

For Dai;y Updates Join Our whatsapp Group

ಬೆಳಗಾವಿ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ಹಾಗೂ ಪ್ರತಿ ಕೆಜಿ ಸಕ್ಕರೆಗೆ 60 ರೂಪಾಯಿ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ಬಂದ್ ಕರೆಯ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ನೂರಾರು ರೈತರು ಜಮಾಯಿಸಿದರು. ಟೋಲ್ ಗೇಟ್ ಮುಂದೆಯೇ ಎತ್ತುಗಳನ್ನು ಕಟ್ಟಿ, ಎತ್ತಿನ ಬಂಡಿಗಳನ್ನು ಅಡ್ಡಲಾಗಿ ನಿಲ್ಲಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ವೇಳೆ ಕೆಲ ರೈತರು ರಸ್ತೆಯ ಮೇಲೆ ಬಾರುಕೋಲು ಬೀಸಿದರೆ, ಮತ್ತಿತರರು ಕೈಯಲ್ಲಿ ಪೊರಕೆ ಹಿಡಿದು ಘೋಷಣೆ ಕೂಗಿದರು. ಕೆಲವು ರೈತರು ಹೆದ್ದಾರಿಯಲ್ಲೇ ಉರುಳು ಸೇವೆ ನಡೆಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧವೂ ಘೋಷಣೆಗಳು ಕೇಳಿಬಂದವು.

ಕಬ್ಬಿಗೆ ಸೂಕ್ತ ಬೆಲೆ ನಿಗದಿ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳ, ಸ್ವಾಮಿನಾಥನ್ ಆಯೋಗದ ವರದಿ ಜಾರಿ ಹಾಗೂ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಸಂಪೂರ್ಣ ಖರೀದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆ.

ಹಿರೇಬಾಗೇವಾಡಿ ಬಳಿ ಹೆದ್ದಾರಿ ತಡೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇತ್ತ ಧಾರವಾಡ ಜಿಲ್ಲೆಯಲ್ಲಿಯೂ ರೈತರ ಪ್ರತಿಭಟನೆ ತೀವ್ರಗೊಂಡಿತು. ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆದ ಸಭೆ ವಿಫಲವಾಗಿದೆ ಎಂದು ಆರೋಪಿಸಿದ ರೈತರು, ಧಾರವಾಡ ಹೊರವಲಯದ ಯರಿಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರೈತರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಭೂಷಣ ಬೋರಸೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು.

ಎಸ್‌ಪಿ ಗುಂಜನ್ ಆರ್ಯ, ಡಿವೈಎಸ್‌ಪಿ ವಿನೋದ ಮುಕ್ತೇದಾರ್ ಹಾಗೂ ಸಿಪಿಐ ಶಿವಾನಂದ ಕಮತಗಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಯರಿಕೊಪ್ಪದ ಜೊತೆಗೆ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿಯೂ ರೈತರು ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img