ಕಲಬುರಗಿ: ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಇಂಜಿನಿಯರಿಂಗ್ ಪದವೀಧರ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಾನಸ ಲೇಔಟ್‌ನ ನಿವಾಸಿ ಹಾಗೂ ವಿಜಯಪುರ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಭಾರತಿ ಅಪ್ಪಾರಾವ್ ಮಾಲಿಪಾಟೀಲ್ ಅವರ ಪುತ್ರ ಕೃಷ್ಣ ಮಾಲಿಪಾಟೀಲ್ (25) ಮೃತ ದುರ್ದೈವಿ.
ತಂದೆಯಿಲ್ಲದೆ ತಾಯಿ ಹಾಗೂ ಅಕ್ಕನೊಂದಿಗೆ ಬೆಳೆದಿದ್ದ ಕೃಷ್ಣ, ಕಳೆದ ಕೆಲವು ವರ್ಷಗಳಿಂದ ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಆತ ಕಲಬುರಗಿಯಲ್ಲಿರುವ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ.
ವಿಜಯಪುರದಲ್ಲಿ ಸೇವೆ ಸಲ್ಲಿಸುತ್ತಿರುವ ತಾಯಿ ಜೂನ್ 18ರಂದು ಕೊನೆಯ ಬಾರಿ ಮಗನೊಂದಿಗೆ ಮಾತನಾಡಿದ್ದರು. ಬಳಿಕ ನಿರಂತರವಾಗಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಕೃಷ್ಣನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ ಮೊದಲು ತನ್ನ ಕೈಯ ನರವನ್ನು ಕತ್ತರಿಸಿಕೊಂಡು, ಬಳಿಕ ಎರಡು ಕೈಗಳನ್ನು ಕಟ್ಟಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಘಟನೆಯು ಜೂನ್ 18ರಂದೇ ನಡೆದಿರಬಹುದೆಂದು ಶಂಕಿಸಲಾಗಿದೆ.
ಸಿಂಗಲ್ ಪೇರೆಂಟ್ ಕುಟುಂಬದ ಹಿನ್ನೆಲೆ ಮತ್ತು ಮಾನಸಿಕ ಒತ್ತಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ್ಯುವಿನ ನಿಖರ ಕಾರಣ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



