ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಮೊಹರಂ ಆಚರಣೆಯ ಸಂದರ್ಭದಲ್ಲಿ ಎಲ್ಲರೂ ಸೌಹಾರ್ದತೆ ಮತ್ತು ಸಹೋದರತ್ವದಿಂದ ನಡೆದುಕೊಳ್ಳಬೇಕು. ಯಾರೇ ಆಗಲಿ ಮತೀಯ ಭಾವನೆಗಳಿಗೆ ಧಕ್ಕೆ ತಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ವಿಕಾಸ್ ಲಮಾಣಿ ಎಚ್ಚರಿಕೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮೊಹರಂ ಮೆರವಣಿಗೆ ಹಾಗೂ ಅಲೈಕುಣಿ ಕಾರ್ಯಕ್ರಮಗಳ ವೇಳೆ ಎಲ್ಲರೂ ವೈಯಕ್ತಿಕ ಜವಾಬ್ದಾರಿಯಿಂದ ವರ್ತಿಸಬೇಕು. ಮಸೀದಿಗಳ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಹಿತಕರ ಘಟನೆಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಗಣೇಶ್ ಮಾತನಾಡಿ, ಮೊಹರಂ ಅತ್ಯಂತ ಭಾವನಾತ್ಮಕ ಹಾಗೂ ಸೂಕ್ಷ್ಮ ಹಬ್ಬವಾಗಿದ್ದು, ಎಲ್ಲರೂ ಸಂಯಮ ಮತ್ತು ಪರಸ್ಪರ ಗೌರವದಿಂದ ಆಚರಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಸೆರೆಗಾರ್ ಹುಚ್ಚಪ್ಪ ಮಾತನಾಡಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಕೆಲ ಅಪರೂಪದ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲ ಧರ್ಮದ ಜನರು ಹೊಂದಾಣಿಕೆಯಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಅದೇ ಸೌಹಾರ್ದತೆ ಮುಂದುವರಿಯಬೇಕು ಎಂದು ಹೇಳಿದರು.
ಬಾರಿಕರ ಬಾಪೂಜಿ ಮಾತನಾಡಿ, ಇಂದಿನ ಯುವಕರು ವಿದ್ಯಾವಂತರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಿದರೆ ಯಾವುದೇ ರೀತಿಯ ವಿವಾದಗಳಿಗೆ ಅವಕಾಶ ಇರುವುದಿಲ್ಲ ಎಂದರು.
ಪತ್ರಕರ್ತ ಸರ್ದಾರ್ ಯಮನೂರಪ್ಪ ಮಾತನಾಡಿ, ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದು, ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಇತ್ತೀಚೆಗೆ ಯುವಕರು ಬೈಕ್ ವೀಲಿಂಗ್ ಹಾಗೂ ಸೈಲೆನ್ಸರ್ ಸದ್ದು ಮಾಡುವ ಮೂಲಕ ಸಾರ್ವಜನಿಕರಿಗೆ, ವಿಶೇಷವಾಗಿ ವೃದ್ಧರಿಗೆ ತೊಂದರೆ ಉಂಟುಮಾಡುತ್ತಿರುವುದು ಕಂಡು ಬರುತ್ತಿದೆ. ಇಂತಹ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಕಡ್ಲೆಬಾಳು ಗ್ರಾಮದ ಮುಸ್ಲಿಂ ಮುಖಂಡರಾದ ಇಮಾಮ್ ಸಾಬ್ ಬಲ್ಲಾಹುಣಿಸಿ ಹಾಗೂ ಕರೀಂಸಾಬ್ ಶಾಂತಿ ಸಭೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಭಾರಿ ಪಿಎಸ್‌ಐ ಉಮಾಪತಿ ನಾಯಕ್, ನೈರ್ಮಲ್ಯಾಧಿಕಾರಿ ಕೆ. ವಿಜಯಲಕ್ಷ್ಮಿ, ಎಸ್.ಬಿ. ಹನುಮಂತು, ಮಲ್ಲೇಶ್ ನಾಯಕ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಇದಲ್ಲದೆ ಅರಸೀಕೆರೆ ಹನುಮಂತಪ್ಪ, ಸರ್ದಾರ್ ಅಂಬಣ್ಣ, ಚಿಗರಿ ಮಾರುತಿ, ವಿ. ಸೋಮಣ್ಣ, ಎಂ. ಇಮಾಮ್‌ಸಾಬ್, ಬಿ. ಮೌಲಾಸಾಬ್, ಸಣ್ಣ ಬುಡೇನ್‌ಸಾಬ್, ಅಕ್ಕಂಡಿ ಯಮನೂರ್, ಪುಂಡಿ ಜಮಾಲ್‌ಸಾಬ್, ಮೋರಿಗೇರಿ ನಾಗಪ್ಪ, ಕುರದಗಡ್ಡಿ ಸಿದ್ದಪ್ಪ, ಬಂಡಿ ಮಾಬುಸಾಬ್, ಪೈಂಟರ್ ವೀರೇಶ್, ಶಾಮಣ್ಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ದೈವಸ್ಥರು, ಮುಖಂಡರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
“ಮೊಹರಂ ಆಚರಣೆಯಲ್ಲಿ ಎಲ್ಲರೂ ಸ್ನೇಹ, ಸೌಹಾರ್ದತೆಯಿಂದ ನಡೆದುಕೊಳ್ಳಬೇಕು. ಮತೀಯ ಭಾವನೆಗಳಿಗೆ ಧಕ್ಕೆ ತಂದು ಸಮಾಜದ ಶಾಂತಿ ಕದಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು.”
– ವಿಕಾಸ್ ಲಮಾಣಿ, ಸಿಪಿಐ, ಹಗರಿಬೊಮ್ಮನಹಳ್ಳಿ



