ಬೆಂಗಳೂರು: ನಗರದ ಕೆ.ಆರ್.ಪುರದಲ್ಲಿ ತಂದೆ, ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಮುಖ ಆರೋಪಿ ಶ್ವೇತಾ ಸುಮಾರು 30 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಳು ಎಂಬ ಮಾಹಿತಿ ಬೆಳಕಿಗೆ ಬಂದಿದ್ದು, ಇದೇ ಸಾಲದ ವಿಚಾರ ಕೊಲೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣದಲ್ಲಿ ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಮತ್ತು ಸುಪ್ರಿಯಾ (20) ಹತ್ಯೆಯಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಸದ್ಯ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶ್ವೇತಾ ಮತ್ತು ಕೆನತ್ ಲಿವ್-ಇನ್ ಸಂಬಂಧದಲ್ಲಿದ್ದ ಸಂದರ್ಭದಲ್ಲಿ ಸುಮಾರು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸಲು ಹಣದ ಅಗತ್ಯವಿದ್ದ ಕಾರಣ, ಶ್ವೇತಾ ತನ್ನ ತಂದೆ-ತಾಯಿಯ ಬಳಿ ಆರ್ಥಿಕ ಸಹಾಯ ಕೇಳಿದ್ದಳು. ಆದರೆ ಪೋಷಕರು ಹಣ ನೀಡಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.
ಇದಾದ ಬಳಿಕ ಕುಟುಂಬದ ಆಸ್ತಿಯಲ್ಲಿ ತನ್ನ ಪಾಲು ನೀಡುವಂತೆ ಶ್ವೇತಾ ಒತ್ತಾಯ ಮಾಡಿದ್ದಳು. ಈ ವಿಚಾರವಾಗಿ ಕುಟುಂಬದ ಸದಸ್ಯರ ನಡುವೆ ಹಲವು ಬಾರಿ ವಾಗ್ವಾದ ಮತ್ತು ಗಲಾಟೆಗಳು ನಡೆದಿದ್ದವು ಎನ್ನಲಾಗಿದೆ.
ಘಟನೆ ನಡೆದ ದಿನವೂ ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದ್ದು, ಬಳಿಕ ಶ್ವೇತಾ ಮತ್ತು ಕೆನತ್ ಸೇರಿ ತಂದೆ, ತಾಯಿ ಹಾಗೂ ತಂಗಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆ ಲಭ್ಯವಾದ ಮಾಹಿತಿಯಂತೆ, ಶ್ವೇತಾ ಮತ್ತು ಕೆನತ್ ನಡುವಿನ ಲಿವ್-ಇನ್ ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಮಗಳಿಗೆ ಬುದ್ಧಿವಾದ ಹೇಳಲು ಮುಂದಾದ ಸಂದರ್ಭದಲ್ಲಿ ಘಟನೆ ನಡೆದಿರಬಹುದು ಎಂದು ತನಿಖೆ ಸೂಚಿಸುತ್ತಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು. ಸಾವಿಗೂ ಮುನ್ನ, ತಮ್ಮ ಮೇಲೆ ಮಗಳು ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್ ದಾಳಿ ನಡೆಸಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ಕಡೆಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಹತ್ಯೆಯ ಹಿಂದಿನ ನಿಖರ ಕಾರಣಗಳ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ.



