HomeCrime Newsಟ್ರೆಕ್ಕಿಂಗ್ ನೆಪದಲ್ಲಿ ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಕೊಲೆ: ಆರೋಪಿ ಧರಿಸಿದ್ದ ಹೂಡಿಯಿಂದ ಬಯಲಾಯ್ತು ಪ್ಲ್ಯಾನ್!

ಟ್ರೆಕ್ಕಿಂಗ್ ನೆಪದಲ್ಲಿ ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಕೊಲೆ: ಆರೋಪಿ ಧರಿಸಿದ್ದ ಹೂಡಿಯಿಂದ ಬಯಲಾಯ್ತು ಪ್ಲ್ಯಾನ್!

For Dai;y Updates Join Our whatsapp Group

Spread the love

ಮುಂಬೈ: ಟ್ರೆಕ್ಕಿಂಗ್‌ಗೆ ಕರೆದುಕೊಂಡು ಹೋಗಿ ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಹತ್ಯೆಗೈದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ಆರೋಪಿಯೊಬ್ಬ ಧರಿಸಿದ್ದ ಹೂಡಿಯೇ ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ.

ಮಹಾರಾಷ್ಟ್ರದ ಲೋಹಗಡ್ ಕೋಟೆಯಲ್ಲಿ ಜೂನ್ 18ರಂದು ಈ ಘಟನೆ ನಡೆದಿತ್ತು. ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಅವರು ಭಾವಿ ಪತ್ನಿ ಸಿಯಾ ಗೋಯಲ್ ಜೊತೆ ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಕಾಲು ಜಾರಿ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮೊದಲು ಅಪಘಾತ ಪ್ರಕರಣವೆಂದು ದಾಖಲಿಸಿಕೊಂಡಿದ್ದರು.

ಆದರೆ ತನಿಖೆ ಮುಂದುವರಿದಂತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿಯಾ ಗೋಯಲ್ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಕೇತನ್ ಅಗರ್ವಾಲ್ ಅವರನ್ನು ಸುಮಾರು 400 ಅಡಿ ಆಳದ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ವೇಳೆ ಕೋಟೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಕೇತನ್ ಮತ್ತು ಸಿಯಾ ಅವರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಬಿಸಿಲಿನ ನಡುವೆಯೂ ಹೂಡಿ ಧರಿಸಿರುವುದು ಗಮನ ಸೆಳೆದಿತ್ತು. ಜೂನ್ ತಿಂಗಳಲ್ಲಿ ಸುಮಾರು 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೂ ದಪ್ಪ ಹಾಗೂ ಬೆಚ್ಚಗಿನ ಉಡುಪು ಧರಿಸಿದ್ದ ವ್ಯಕ್ತಿ ಪೊಲೀಸರಲ್ಲಿ ಅನುಮಾನ ಹುಟ್ಟಿಸಿದ್ದಾನೆ.

ಈ ಸುಳಿವಿನ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು, ಹೂಡಿ ಧರಿಸಿದ್ದ ವ್ಯಕ್ತಿಯ ಗುರುತು ಪತ್ತೆಹಚ್ಚಿದ್ದು, ಆತ ಚೇತನ್ ಚೌಧರಿ ಎಂಬುದು ತಿಳಿದುಬಂದಿದೆ. ತನ್ನ ಚಲನವಲನಗಳ ಬಗ್ಗೆ ಸುಳಿವು ಸಿಗದಂತೆ ಮಾಡಲು ಚೇತನ್ ತನ್ನ ಮೊಬೈಲ್ ಫೋನ್ ಅನ್ನು ಕೆಲಸದ ಸ್ಥಳದಲ್ಲೇ ಬಿಟ್ಟು ಹೋಗಿದ್ದ ಹಾಗೂ ಸ್ಥಳ ಮಾಹಿತಿ ಪತ್ತೆಯಾಗದಂತೆ ಸಿಬ್ಬಂದಿಯೊಬ್ಬರ ಮೊಬೈಲ್ ಬಳಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಇದರ ಜೊತೆಗೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಡುವೆ ಸಾವಿರಾರು ಬಾರಿ ಕರೆಗಳು ನಡೆದಿರುವುದು ಹಾಗೂ ಹಲವು ಗಂಟೆಗಳ ಕಾಲ ಇಬ್ಬರೂ ಸಂಭಾಷಣೆ ನಡೆಸಿರುವುದನ್ನು ಕಾಲ್ ಡೀಟೇಲ್ ದಾಖಲೆಗಳು ದೃಢಪಡಿಸಿವೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ ಕುಟುಂಬದ ಗೌರವದ ಕಾರಣ ಸಿಯಾ ನಿಶ್ಚಿತಾರ್ಥವನ್ನು ರದ್ದುಪಡಿಸಲು ಮುಂದಾಗಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷದ ನವೆಂಬರ್‌ನಲ್ಲಿ ಉದಯಪುರದಲ್ಲಿ ಅದ್ದೂರಿ ವಿವಾಹ ನೆರವೇರಿಸಲು ಕುಟುಂಬಗಳು ಸಿದ್ಧತೆ ನಡೆಸಿದ್ದವು. ಆದರೆ ಮದುವೆಗೆ ಮುನ್ನವೇ ಕೇತನ್ ಅವರನ್ನು ಲೋಹಗಡ್ ಕೋಟೆಗೆ ಕರೆದುಕೊಂಡು ಹೋಗುವಂತೆ ಸಿಯಾ ಹಲವು ಬಾರಿ ಒತ್ತಾಯ ಮಾಡಿದ್ದಳು ಎನ್ನಲಾಗಿದೆ.

ಜೂನ್ 18ರಂದು ಕೋಟೆಯ ಕಣಿವೆ ಸಮೀಪ ಮೂವರು ಇದ್ದ ವೇಳೆ ಕೇತನ್ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದರು. ಘಟನೆಯ ಬಳಿಕ ಸಿಯಾ ಗೋಯಲ್ ಪೊಲೀಸರಿಗೆ ಕರೆ ಮಾಡಿ, ಫೋಟೋ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಳು. ಆದರೆ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆಗಳ ವಿವರಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆಯ ಬಳಿಕ ಇದು ಪೂರ್ವನಿಯೋಜಿತ ಹತ್ಯೆ ಎಂಬುದು ದೃಢಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇಬ್ಬರೂ ಹತ್ಯೆ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!