HomeKarnataka Newsಆರೋಪಿ ಬದಲು ತಮ್ಮನ ಬಂಧನಕ್ಕೆ ಹೈಕೋರ್ಟ್ ಆಕ್ರೋಶ; ‘ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡಬಹುದೇ?’...

ಆರೋಪಿ ಬದಲು ತಮ್ಮನ ಬಂಧನಕ್ಕೆ ಹೈಕೋರ್ಟ್ ಆಕ್ರೋಶ; ‘ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡಬಹುದೇ?’ – ಪೊಲೀಸರಿಗೆ ತರಾಟೆ

For Dai;y Updates Join Our whatsapp Group

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ಪ್ರೊಬೇಷನರಿ ಎಸ್‌ಐ ಬದಲಿಗೆ ಅವರ ಸಹೋದರನನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

‘ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ?’ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಕಾನೂನು ಉಲ್ಲಂಘಿಸಿ ನಿರಪರಾಧಿಗಳನ್ನು ಬಂಧಿಸುವ ಪೊಲೀಸರ ವಿರುದ್ಧ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ದಾವಣಗೆರೆಯ ನಿವಾಸಿ ಎನ್. ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ, ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಆರೋಪಿಯ ಸಹೋದರನನ್ನು ಏಕೆ ಬಂಧಿಸಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ, ವಿನಾಕಾರಣ ಬಂಧಿಸುವುದು ಕೆಲ ಪೊಲೀಸರಿಗೆ ಅಭ್ಯಾಸವಾಗಿರುವಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಬಂಧನಕ್ಕೊಳಗಾಗುವ ವ್ಯಕ್ತಿಯ ಜೀವನದ ಮೇಲೆ ಅದರ ಪರಿಣಾಮ ಏನಾಗಬಹುದು ಎಂಬ ಅರಿವು ಪೊಲೀಸರಿಗೆ ಇರಬೇಕು ಎಂದು ಕೋರ್ಟ್‌ ಹೇಳಿತು.

ಬಂಧನ ಅಗತ್ಯವಿರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುವ ಪೊಲೀಸರು, ಅಗತ್ಯವಿಲ್ಲದ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಬಂಧಿಸಿ ಕಿರುಕುಳ ನೀಡುವುದು ಸರಿಯಲ್ಲ. ಇಂತಹ ಕ್ರಮಗಳು ಕಾನೂನು ದುರುಪಯೋಗಕ್ಕೆ ಕಾರಣವಾಗುತ್ತವೆ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಟೀಕಿಸಿತು.

ಈ ವೇಳೆ, ತಪ್ಪಾಗಿ ಬಂಧನ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸೂಚಿಸಿದ ನ್ಯಾಯಪೀಠ, ಇಂತಹ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್‌ಗಳೂ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ತಿಳಿಸಿತು. ಕಾನೂನು ಉಲ್ಲಂಘಿಸಿ ಬಂಧನ ನಡೆಸುವ ಪೊಲೀಸರ ವಿರುದ್ಧ ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಪ್ರೊಬೇಷನರಿ ಎಸ್‌ಐ ಅವರ ಸಹೋದರನನ್ನು ಬಂಧಿಸಿದ್ದ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿರುವ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಪ್ರೊಬೇಷನರಿ ಎಸ್‌ಐ ವರುಣ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಮಹಿಳೆಯೊಬ್ಬರೊಂದಿಗೆ ಸ್ನೇಹ ಬೆಳೆಸಿದ್ದರು. ಬಳಿಕ ಇಬ್ಬರ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ನಂತರ ಆ ಮಹಿಳೆಗೆ ಈಗಾಗಲೇ ವಿವಾಹವಾಗಿರುವುದು ತಿಳಿದ ಹಿನ್ನೆಲೆಯಲ್ಲಿ ವರುಣ್ ಕುಮಾರ್ ಸಂಬಂಧವನ್ನು ಕಡಿತಗೊಳಿಸಿದ್ದರು.

ಇದಾದ ಬಳಿಕ ಮಹಿಳೆ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರೊಬೇಷನರಿ ಎಸ್‌ಐ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ತನಿಖೆ ವೇಳೆ ಆರೋಪಿಯ ಸಹೋದರನನ್ನೂ ಬಂಧಿಸಲಾಗಿತ್ತು.

ಬಂಧನವನ್ನು ಪ್ರಶ್ನಿಸಿ ಆರೋಪಿ ಹಾಗೂ ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವಾರ ನ್ಯಾಯಾಲಯ ಪೊಲೀಸರ ಕ್ರಮವನ್ನು ಪ್ರಶ್ನಿಸಿದ ಬೆನ್ನಲ್ಲೇ ಬಂಧಿತನನ್ನು ಪೊಲೀಸರು ಬಿಡುಗಡೆ ಮಾಡಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img