Home India News ನನ್ನ ಮಗಳು ತಪ್ಪಿತಸ್ಥಳಾದರೆ ಅದೇ ಕೋಟೆಯಿಂದ ತಳ್ಳಿಬಿಡಿ: ಸಿಯಾ ಪೋಷಕರ ಆಕ್ರೋಶ

ನನ್ನ ಮಗಳು ತಪ್ಪಿತಸ್ಥಳಾದರೆ ಅದೇ ಕೋಟೆಯಿಂದ ತಳ್ಳಿಬಿಡಿ: ಸಿಯಾ ಪೋಷಕರ ಆಕ್ರೋಶ

0
ನನ್ನ ಮಗಳು ತಪ್ಪಿತಸ್ಥಳಾದರೆ ಅದೇ ಕೋಟೆಯಿಂದ ತಳ್ಳಿಬಿಡಿ: ಸಿಯಾ ಪೋಷಕರ ಆಕ್ರೋಶ
Spread the love

ಮುಂಬೈ: ಟ್ರೆಕ್ಕಿಂಗ್ ನೆಪದಲ್ಲಿ ಭಾವಿ ಪತಿ ಕೇತನ್ ಅಗರ್ವಾಲ್ ರನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಸಿಯಾ ಗೋಯಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಮಗಳು ತಪ್ಪಿತಸ್ಥಳಾಗಿರುವುದು ಸಾಬೀತಾದರೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿರುವ ಅವರು, ಕೇತನ್ ಅವರನ್ನು ತಳ್ಳಿದ ಅದೇ ಸ್ಥಳದಿಂದ ಸಿಯಾಳನ್ನು ತಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಯಾಳ ತಾಯಿ ಪೂಜಾ ಗೋಯಲ್, ಮದುವೆ ವಿಚಾರದಲ್ಲಿ ತಮ್ಮ ಮಗಳು ಯಾವುದೇ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿದ್ದಾರೆ.

ಸಿಯಾ ಮತ್ತು ಕೇತನ್ ಅವರ ವಿವಾಹ ಇದೇ ವರ್ಷದ ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರ ಅರಮನೆಯಲ್ಲಿ ನಡೆಯಬೇಕಾಗಿತ್ತು. ಈ ದುರ್ಘಟನೆ ಕೇತನ್ ಕುಟುಂಬಕ್ಕೆ ಮಾತ್ರವಲ್ಲ, ನಮ್ಮ ಕುಟುಂಬಕ್ಕೂ ತೀವ್ರ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

“ಕೇತನ್ ಕುಟುಂಬಕ್ಕಿಂತಲೂ ಹೆಚ್ಚು ನೋವು ನಮ್ಮ ಕುಟುಂಬ ಅನುಭವಿಸುತ್ತಿದೆ. ಆರೋಪಿ ನನ್ನ ಮಗಳಾಗಿದ್ದರೂ, ತಪ್ಪಿತಸ್ಥಳಾಗಿದ್ದರೆ ಆಕೆಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಕೇತನ್ ಅವರನ್ನು ತಳ್ಳಿದ ಸ್ಥಳದಿಂದಲೇ ಅವಳನ್ನೂ ತಳ್ಳಬೇಕು” ಎಂದು ಪೂಜಾ ಗೋಯಲ್ ಹೇಳಿದ್ದಾರೆ.

ಸಿಯಾಳ ತಂದೆ ಪ್ರವೀಣ್ ಗೋಯಲ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಆರೋಪಿ ನನ್ನ ಸ್ವಂತ ಮಗಳೇ ಆಗಿದ್ದರೂ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು. ಕೇತನ್ ಅವರನ್ನು ತಳ್ಳಿದ ಅದೇ ಕೋಟೆಯಿಂದ ಅವಳನ್ನೂ ತಳ್ಳಬೇಕು” ಎಂದು ಹೇಳಿದ್ದಾರೆ.

ಈ ಘಟನೆಯನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಅವರು, ಕೇತನ್ ಅವರನ್ನು ತಮ್ಮ ಮಗನಂತೆಯೇ ಪ್ರೀತಿಸುತ್ತಿದ್ದೆವು ಎಂದಿದ್ದಾರೆ. “ಕೇತನ್ ತಂದೆ-ತಾಯಿ ತಮ್ಮ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಅದೇ ರೀತಿ ನಾವು ಕೂಡ ಅಪಾರ ನೋವಿನಲ್ಲಿದ್ದೇವೆ. ಒಬ್ಬ ಒಳ್ಳೆಯ ಹುಡುಗನನ್ನು ಕಳೆದುಕೊಂಡಿರುವುದು ನಮ್ಮೆಲ್ಲರಿಗೂ ದೊಡ್ಡ ಆಘಾತ” ಎಂದು ಭಾವುಕರಾಗಿ ಹೇಳಿದ್ದಾರೆ.

ಇದೇ ವೇಳೆ, ಚೇತನ್ ಎಂಬ ವ್ಯಕ್ತಿಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸಿಯಾ ಪೋಷಕರು ಸ್ಪಷ್ಟಪಡಿಸಿದ್ದಾರೆ. ನಿಶ್ಚಿತಾರ್ಥವಾದ ಬಳಿಕ ಸಿಯಾ ಕೇತನ್ ಜೊತೆಯೇ ಮಾತನಾಡುತ್ತಿದ್ದಳು. ಚೇತನ್ ಯಾರು ಎಂಬುದೇ ಗೊತ್ತಿರಲಿಲ್ಲ. ಆತನನ್ನು ನಾವು ಎಂದಿಗೂ ನೋಡಿಲ್ಲ, ಮಾತನಾಡಿಲ್ಲ ಹಾಗೂ ಆತ ನಮ್ಮ ಮನೆಗೂ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.

ಕೇತನ್ ಕುಟುಂಬ ಸಿಯಾಳನ್ನು ತಮ್ಮ ಮನೆಯ ಮಗಳಂತೆ ನೋಡಿಕೊಳ್ಳುತ್ತಿತ್ತು. ಆಕೆಯ ಹುಟ್ಟುಹಬ್ಬ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅವರು ಅದ್ಧೂರಿಯಾಗಿ ಆಯೋಜಿಸಿದ್ದರು. ಮದುವೆ ಸಿದ್ಧತೆಗಳು ಸುಗಮವಾಗಿ ನಡೆಯುತ್ತಿದ್ದು, ಈ ಸಂಬಂಧದ ಬಗ್ಗೆ ಸಿಯಾ ಎಂದಿಗೂ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ ಎಂದು ಪೋಷಕರು ಹೇಳಿದ್ದಾರೆ.

ಪ್ರಸ್ತುತ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.


Spread the love

LEAVE A REPLY

Please enter your comment!
Please enter your name here