ರಾಮನಗರ: ಹಾರೋಹಳ್ಳಿ ತಾಲೂಕಿನ ಸುಂಡಗಟ್ಟ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡು ಬೆಂಗಳೂರಿನ ವಕೀಲ ಮೋಹನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಫಾರ್ಮ್‌ಹೌಸ್ ಗೇಟ್ ಬಳಿ ಇರಿಸಲಾಗಿದ್ದ ಸ್ಫೋಟಕದ ಮೇಲೆ ಕಾಲಿಟ್ಟಾಗ ಈ ದುರ್ಘಟನೆ ಸಂಭವಿಸಿದೆ.
ಸುಂಡಗಟ್ಟ ಗ್ರಾಮದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಗುರುವಾರ ರಾತ್ರಿ ತಂಗಿದ್ದ ಮೋಹನ್, ಶುಕ್ರವಾರ ಬೆಳಗ್ಗೆ ಹೊರಬರುವಾಗ ಗೇಟ್ ಸಮೀಪ ಇರಿಸಿದ್ದ ನಾಡಬಾಂಬ್ ಗಮನಿಸದೆ ಅದರ ಮೇಲೆ ಕಾಲಿಟ್ಟಿದ್ದಾರೆ. ಕೂಡಲೇ ಸ್ಫೋಟ ಸಂಭವಿಸಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ಮೋಹನ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಕೋಡಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡು ಪ್ರಾಣಿಗಳ ಬೇಟೆ ಉದ್ದೇಶದಿಂದ ನಾಡಬಾಂಬ್ ಇರಿಸಲಾಗಿರಬಹುದು ಎಂಬ ಶಂಕೆಯಡಿ ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಫೋಟಕವನ್ನು ಇಟ್ಟವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.