ತುಮಕೂರು/ಧಾರವಾಡ: ರಾಜ್ಯದಲ್ಲಿ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳು ನಾಲ್ವರಿಗೆ ಕಣ್ಣೀರಿನ ಮಳೆ ಸುರಿಸಿವೆ. ತುಮಕೂರಿನಲ್ಲಿ ಹೊಸ ಬೈಕ್ ಖರೀದಿಸಿದ ಮರುದಿನವೇ ಯುವಕ ಪ್ರಾಣ ಕಳೆದುಕೊಂಡಿದ್ದರೆ, ಧಾರವಾಡದಲ್ಲಿ ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ದೊಡ್ಡಹಳ್ಳಿ ನಿವಾಸಿ 19 ವರ್ಷದ ನಂದೀಶ್ ಕುಮಾರ್ ಸಾವನ್ನಪ್ಪಿದ್ದಾರೆ. ನಿನ್ನೆಯಷ್ಟೇ ಹೊಸ ಬೈಕ್ ಖರೀದಿಸಿದ್ದ ಅವರು ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ನಂದೀಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ಟೈರ್ ಬ್ಲಾಸ್ಟ್ನಿಂದ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಹಳೇ ತೇಗೂರು ನಿವಾಸಿ ಷಣ್ಮುಖ ಜೋಗಿ (28) ಹಾಗೂ ಉತ್ತರ ಪ್ರದೇಶ ಮೂಲದ ಸಾಗರ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಟೈರ್ ಬದಲಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಗರಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.