ಬಾಗಲಕೋಟೆ: “ಇಡಿ ದಾಳಿ ಬಗ್ಗೆ ಭಯವಿದ್ದರೆ ಅದರ ಹಿಂದೆ ಕಾರಣವೇನು? ತಪ್ಪು ಮಾಡದೇ ಇದ್ದರೆ ಯಾಕೆ ಹೆದರಬೇಕು?” ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಇಡಿ ಹಾಗೂ ಐಟಿ ದಾಳಿ ನಡೆಸುತ್ತಿದೆ. ಮುಂದೆ ನಮ್ಮ ಮೇಲೂ ದಾಳಿ ಆಗಬಹುದು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ, “ಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿಕೊಳ್ಳುತ್ತೀರಿ?” ಎಂದು ಪ್ರಶ್ನಿಸಿದರು.
ಇಡಿ ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಲ್ಲ. ಪೂರಕ ದಾಖಲೆಗಳು ಹಾಗೂ ದೃಢವಾದ ಸಾಕ್ಷ್ಯಗಳ ಆಧಾರದಲ್ಲಿಯೇ ತನಿಖೆ ಮತ್ತು ದಾಳಿ ನಡೆಸುತ್ತದೆ. ಕ್ಲೀನ್ ಆಗಿದ್ದರೆ ಆತಂಕಪಡುವ ಅಗತ್ಯವೇ ಇಲ್ಲ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ರಾಜಕೀಯವಾಗಿ ಉಜ್ವಲ ಭವಿಷ್ಯ ಹೊಂದಿದ್ದಾರೆ. ಹೀಗಾಗಿ ವಿವಾದಾತ್ಮಕ ಹೇಳಿಕೆಗಳ ಬದಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಕೈಗಾರಿಕೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಆರ್‌ಎಸ್‌ಎಸ್ ಕುರಿತು ಮಾತನಾಡುವ ಮುನ್ನ ಅದರ ತತ್ವ-ಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು. ದಿನನಿತ್ಯ ನೆಗೆಟಿವ್ ಸುದ್ದಿಗಳಲ್ಲೇ ಕಾಣಿಸಿಕೊಳ್ಳುವ “ಪೇಪರ್ ಹುಲಿ” ಆಗಬಾರದು ಎಂದು ನಿರಾಣಿ ಕಿಡಿಕಾರಿದರು.