ಬಾಗಲಕೋಟೆ: ಬಿಟಿಡಿಎ ಕಚೇರಿಯಲ್ಲಿ ಸಾರ್ವಜನಿಕ ಸೇವಾ ವಿಳಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತನೊಬ್ಬ ನೌಕರನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ನವನಗರದಲ್ಲಿ ನಡೆದಿದೆ.
ಸಫಾಯಿ ಕರ್ಮಚಾರಿಗಳಿಗೆ ಪ್ಲಾಟ್ ಹಂಚಿಕೆ ಮಾಡದ ಹಿನ್ನೆಲೆ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ನಡುವೆ ರೈತ ಬಸಪ್ಪ ದೊಡಮನಿ ಕಚೇರಿಗೆ ಆಗಮಿಸಿ ತಮ್ಮ ಭೂ ಪರಿಹಾರ ಸಮಸ್ಯೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ವರ್ಷಗಳಿಂದ ಮುಳುಗಡೆ ಭೂಮಿಗೆ ಪರಿಹಾರ ಸಿಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೈತ ಬಸಪ್ಪ ಮತ್ತು ಟೈಪಿಸ್ಟ್ ನೀಲಕಂಠ ಅಂಕದ್ ನಡುವೆ ವಾಗ್ವಾದ ಉಂಟಾಗಿದೆ. ವಾಗ್ವಾದ ತೀವ್ರಗೊಂಡು ಪರಿಸ್ಥಿತಿ ನಿಯಂತ್ರಣ ತಪ್ಪಿದೆ.
ಈ ವೇಳೆ ಕೋಪಗೊಂಡ ರೈತ ಬಸಪ್ಪ ಚಪ್ಪಲಿಯಿಂದ ನೌಕರನಿಗೆ ಹೊಡೆದಿದ್ದು, ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಬಳಿಕ ಸ್ಥಳಕ್ಕೆ ಸಂಬಂಧಿಸಿದವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಪ್ರಕರಣ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



