ಜಮಖಂಡಿ: ಜೈಲಿನೊಳಗೆ ನಡೆದ ಗಲಾಟೆ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಜಮಖಂಡಿ ಹೊರವಲಯದ ಕಾರಾಗೃಹದಲ್ಲಿ ನಡೆದಿದೆ.
ಘಟನೆಯಲ್ಲಿ ಜೈಲರ್ ವಿ.ಡಿ. ಕುಂಬಾರ ಅವರ ಎಡಗೈ ಫ್ರಾಕ್ಚರ್ ಆಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಜಾಕೀರ್ ಹುಸೇನ್ ಮಕಾಂದಾರ್ ಮತ್ತು ಆತನ ಸಹಚರರು ಜೈಲಿನಲ್ಲಿದ್ದರು. ಇದೇ ಗ್ಯಾಂಗ್ ಸದಸ್ಯರ ನಡುವೆ ನಿನ್ನೆ ಸಂಜೆ ಜಗಳ ಆರಂಭವಾಗಿತ್ತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಬಂದ ಜೈಲರ್ ಮೇಲೆ ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಜಾಕೀರ್ ಹುಸೇನ್ ಮಕಾಂದಾರ್, ಫಯಾಜ್ ಮಕಾಂದಾರ್, ಅಶೋಕ ನಾಯ್ಕೊಡಿ ಮತ್ತು ಅರ್ಫಾತ್ ತಾಳಿಕೋಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಜೈಲು ಭದ್ರತೆ ಕುರಿತು ಪ್ರಶ್ನೆಗಳು ಎದ್ದಿದ್ದು, ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



