ಚೆನ್ನೈ: ರಜನಿಕಾಂತ್ ಮತ್ತು ಕಮಲ್ ಹಾಸನ್ ಒಂದಾಗುತ್ತಿರುವ ಬಹುನಿರೀಕ್ಷಿತ ‘KHxRK’ ಸಿನಿಮಾಗೆ ನಟಿ ತ್ರಿಶಾ ಕೃಷ್ಣನ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಚಿತ್ರದ ಅನೌನ್ಸ್‌ಮೆಂಟ್ ವಿಡಿಯೋ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟಿಸಿತ್ತು.
ಇದೀಗ ತ್ರಿಶಾ ಈ ಸಿನಿಮಾದ ಪ್ರಮುಖ ಪಾತ್ರಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. 22 ವರ್ಷಗಳಿಂದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿರುವ ತ್ರಿಶಾಗೆ ಇದುವರೆಗೆ ಸಿಕ್ಕಿರುವ ಅತಿದೊಡ್ಡ ಬಜೆಟ್ ಸಿನಿಮಾ ಇದಾಗಲಿದೆ ಎನ್ನಲಾಗಿದೆ.
ತ್ರಿಶಾ ಈಗಾಗಲೇ ಕಮಲ್ ಹಾಸನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರೆ, ರಜನಿಕಾಂತ್ ಜೊತೆ ‘ಪೇಟ್ಟಾ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಕಾಂಬಿನೇಷನ್ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. 1000 ಕೋಟಿ ಕ್ಲಬ್ ಸೇರುವ ಮೊದಲ ತಮಿಳು ಸಿನಿಮಾ ಇದೇ ಆಗಬಹುದು ಎಂಬ ಲೆಕ್ಕಾಚಾರ ಚಿತ್ರರಂಗದಲ್ಲಿ ಕೇಳಿಬರುತ್ತಿದೆ.



