ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿಡಿಸಿದ ಪಟಾಕಿಗಳ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಯುಮಾಲಿನ್ಯದಲ್ಲಿ ಶೇ.25ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) 186ಕ್ಕೆ ತಲುಪಿದ್ದು, ಇತ್ತೀಚಿನ ವರ್ಷಗಳಲ್ಲೇ ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೀಡಿರುವ ಮಾಹಿತಿಯ ಪ್ರಕಾರ, ಭಾನುವಾರ ರಾತ್ರಿ 8 ಗಂಟೆಯ ವೇಳೆಗೆ ಬೆಂಗಳೂರಿನ AQI ಮಟ್ಟ 74ರಷ್ಟಿತ್ತು.
ಆದರೆ ರಾತ್ರಿ ಮುಂದುವರಿದಂತೆ ಪಟಾಕಿಗಳ ಅಬ್ಬರ ಹೆಚ್ಚಾದ ಪರಿಣಾಮ ವಾಯುಮಾಲಿನ್ಯದ ಪ್ರಮಾಣವೂ ಏರಿಕೆಯಾಗಿದೆ. ರಾತ್ರಿ 10 ಗಂಟೆಗೆ AQI 85ಕ್ಕೆ, 11 ಗಂಟೆಗೆ 93ಕ್ಕೆ ಹಾಗೂ ಮಧ್ಯರಾತ್ರಿ 12 ಗಂಟೆಯ ಬಳಿಕ 102ಕ್ಕೆ ತಲುಪಿತ್ತು. ಇದೀಗ ವಾಯು ಗುಣಮಟ್ಟ ಸೂಚ್ಯಂಕ 186ಕ್ಕೆ ಏರಿಕೆಯಾಗಿದೆ.
ಗಾಳಿಯಲ್ಲಿ ಹೆಚ್ಚಾದ ವಿಷಕಾರಿ ಕಣಗಳು!
ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸರ್ಕಾರ ಮತ್ತು ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದರು. ಆದರೆ, ರಾಸಾಯನಿಕ ಮಿಶ್ರಿತ ಪಟಾಕಿಗಳ ಬಳಕೆಯಿಂದಾಗಿ ವಾಯುಮಾಲಿನ್ಯ ಹೆಚ್ಚಾಗಿದೆ ಎನ್ನಲಾಗಿದೆ.
ಪ್ರಸ್ತುತ ಬೆಂಗಳೂರಿನ ಗಾಳಿಯಲ್ಲಿ ಸೂಕ್ಷ್ಮ ಧೂಳಿನ ಕಣಗಳಾದ PM2.5 ಹಾಗೂ ವಿಷಕಾರಿ ರಾಸಾಯನಿಕ ಹೊಗೆಯ ಪ್ರಮಾಣ ಹೆಚ್ಚಾಗಿದೆ. ಇದರಿಂದ ನಗರದ ಗಾಳಿಯ ಗುಣಮಟ್ಟದ ಬಗ್ಗೆ ಆತಂಕ ಎದುರಾಗಿದೆ.










