ಚಿಕ್ಕೋಡಿ: ಮಾಜಿ ಸೈನಿಕ ಸಂದೀಪ್ ಹತ್ಯೆ ಪ್ರಕರಣದಲ್ಲಿ 2 ಕೋಟಿ ರೂಪಾಯಿ ವಿಮೆ ಹಣದ ಲಾಭಕ್ಕಾಗಿ ನಡೆದ ಸಂಚು ಎಂಬ ಅನುಮಾನಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಪ್ರಕರಣದಲ್ಲಿ ಬಂಧಿತರಾದ ಸುಮಾ ಮಂಜರಗಿ ಮತ್ತು ಅವರ ಪ್ರಿಯಕರ ಪುಂಡಲೀಕ ದೊಂಬರ್ ನಡುವಿನ ಸಂಬಂಧ ಇದೀಗ ತನಿಖೆಯಲ್ಲಿ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ.
ಪುಂಡಲೀಕ ದೊಂಬರ್ ತನ್ನ ಸ್ವಯಂ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಮೃತ ಸಂದೀಪ್ ಜೊತೆಗೆ ತನ್ನ ಸಂಪರ್ಕ ಹೇಗೆ ಆರಂಭವಾಯಿತು ಮತ್ತು ನಂತರ ಸುಮಾ ಜೊತೆಗಿನ ಸಂಬಂಧ ಹೇಗೆ ಬೆಳೆಯಿತು ಎಂಬುದನ್ನು ವಿವರಿಸಿದ್ದಾನೆ. ಜೊತೆಗೆ ವಿಮೆ ಹಣದ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರ ನಡುವೆ ಗಂಭೀರ ಗಲಾಟೆ ನಡೆದಿರುವುದಾಗಿ ಹೇಳಿದ್ದಾನೆ.
ತನಿಖಾ ದಾಖಲೆಗಳ ಪ್ರಕಾರ, ಪ್ರಕರಣದ ಬಳಿಕ ಹಣ ಹಂಚಿಕೆ ಸಂಬಂಧ ಪುಂಡಲೀಕ ಹಾಗೂ ಸುಮಾ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಬೆದರಿಕೆಗಳ ಮಟ್ಟಕ್ಕೂ ವಿಷಯ ಹೋಗಿದ್ದುದಾಗಿ ತಿಳಿದುಬಂದಿದೆ. ಈ ಮಧ್ಯೆ ಯಮಕನಮರಡಿ ಪೊಲೀಸರ ಮುಂದೆ ನೀಡಿದ ಹೇಳಿಕೆಗಳ ಆಧಾರದ ಮೇಲೆ ಇಬ್ಬರ ಪಾತ್ರದ ಬಗ್ಗೆ ಸಂಶಯಗಳು ಮತ್ತಷ್ಟು ಹೆಚ್ಚಿವೆ.
ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಶವವನ್ನು ಮರು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಫ್‌ಎಸ್‌ಎಲ್ ವರದಿ ನಿರೀಕ್ಷೆಯಲ್ಲಿದೆ. ತನಿಖೆ ತೀವ್ರಗೊಳಿಸಿರುವ ಪೊಲೀಸರು ಸುಮಾ ಮಂಜರಗಿ ಹಾಗೂ ಪುಂಡಲೀಕ ದೊಂಬರ್ ಅವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



