ಬಾಗಲಕೋಟೆ: ಒಂದು ಸಣ್ಣ ನಿರ್ಲಕ್ಷ್ಯವೇ ಯುವಕನ ಜೀವ ಕಸಿದುಕೊಂಡ ದಾರುಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಾತ್ರೆಯ ವೇಳೆ ಹುಚ್ಚು ನಾಯಿ ಕಚ್ಚಿದ್ದರೂ ರೇಬಿಸ್ ಲಸಿಕೆ ಪಡೆಯದೆ ಕಾಲಹರಣ ಮಾಡಿದ 22 ವರ್ಷದ ಯುವಕ ಇದೀಗ ರೇಬಿಸ್ ಸೋಂಕಿಗೆ ಬಲಿಯಾಗಿದ್ದಾನೆ.
ವಿಜಯಪುರ ಜಿಲ್ಲೆಯ ಗೋಲಸಂಗಿ ಗ್ರಾಮದ ಪ್ರದೀಪ್ ಚಂದ್ರಶೇಖರ ಹಳೇರೊಳ್ಳಿ ಕಳೆದ ಮಾರ್ಚ್‌ನಲ್ಲಿ ಮನ್ನಿಕೇರಿ ಚಂದ್ರಾದೇವಿ ಜಾತ್ರೆಗೆ ತೆರಳಿದ್ದ ವೇಳೆ ನಾಯಿಯ ಕಚ್ಚಿಗೆ ಒಳಗಾಗಿದ್ದ. ಆದರೆ ಗಾಯ ಗಂಭೀರವಲ್ಲ ಎಂದುಕೊಂಡು ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕಳೆದ ಒಂದು ವಾರದಿಂದ ಆತನ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದ್ದು, ರೇಬಿಸ್ ಲಕ್ಷಣಗಳು ದೃಢಪಟ್ಟ ಬಳಿಕ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆದರೆ ಸೋಂಕು ದೇಹದಾದ್ಯಂತ ವ್ಯಾಪಿಸಿದ್ದರಿಂದ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ತಡರಾತ್ರಿ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. “ನಾಯಿ ಕಚ್ಚಿದ ಕೂಡಲೇ ರೇಬಿಸ್ ಲಸಿಕೆ ಪಡೆಯಲೇಬೇಕು, ಇಲ್ಲದಿದ್ದರೆ ಜೀವಕ್ಕೆ ಅಪಾಯ ಖಚಿತ” ಎಂಬ ಆರೋಗ್ಯ ಇಲಾಖೆಯ ಎಚ್ಚರಿಕೆಗೆ ಈ ಘಟನೆ ಮತ್ತೊಂದು ಗಂಭೀರ ಉದಾಹರಣೆಯಾಗಿದೆ.



