ಬಾಗಲಕೋಟೆ: ಕನ್ನೊಳ್ಳಿ ಗ್ರಾಮದಲ್ಲಿ ಕಾರಿನೊಳಗೆ ದಹನಗೊಂಡು ಸಾವನ್ನಪ್ಪಿದ್ದ ವ್ಯಕ್ತಿಯ ಪ್ರಕರಣಕ್ಕೆ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಸಿಕ್ಕಿದೆ. ಇದು ಆಕಸ್ಮಿಕ ಘಟನೆ ಅಲ್ಲ, ಅನೈತಿಕ ಸಂಬಂಧದ ವೈಷಮ್ಯದಿಂದ ನಡೆದ ಕೊಲೆ ಎಂಬುದು ಸ್ಪಷ್ಟವಾಗಿದೆ.
ಸೋಮು ಪಡಸಲಗಿ ಎಂಬ ಕೃಷಿಕನನ್ನು ಸದಾಶಿವ ಪಡಸಲಗಿ ಹಾಗೂ ಅವನ ಸಹಚರರಾದ ರವಿ ಪಾಟಿಲ್ ಮತ್ತು ನಾವಿ ಸೇರಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮೊದಲು ಕಾರನ್ನು ತಡೆದು ಸೋಮು ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಕೊಂದು, ಬಳಿಕ ಶವಕ್ಕೆ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಸುಮಾರು ಮೂರು ವರ್ಷಗಳಿಂದ ಸೋಮು ಮತ್ತು ಸದಾಶಿವ ಪತ್ನಿ ನಡುವೆ ಸಂಬಂಧವಿದ್ದುದರಿಂದ ಇಬ್ಬರ ನಡುವೆ ವೈಷಮ್ಯ ಮುಂದುವರಿದಿತ್ತು. ಇದೇ ಹಿನ್ನೆಲೆ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಯ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳು ಹೊರಬರುವ ಸಾಧ್ಯತೆ ಇದೆ.



