ಬೆಳಗಾವಿ: ತಮ್ಮ ಭಾಮೈದ ವೈ. ಮಂಜುನಾಥ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿ ಅಚ್ಚರಿ ಮೂಡಿಸಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಸಿಕ್ಕ ಬಳಿಕವೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಮಂಜುನಾಥ್ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಹಿಂದೆ ಹೈಕೋರ್ಟ್ ಒಂದು ಹಳೆಯ ಪ್ರಕರಣವನ್ನು ರದ್ದುಪಡಿಸಿತ್ತು. ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ಆರೋಪದಡಿ ಇಡಿ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ” ಎಂದು ಹೇಳಿದರು.
ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ರಾಜ್ಯದಲ್ಲಿ ಲೋಕಾಯುಕ್ತ ಮತ್ತು ಇತರ ತನಿಖಾ ಸಂಸ್ಥೆಗಳಿವೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ತನಿಖೆ ಅಗತ್ಯವಿದ್ದರೆ ಸಿಬಿಐ ತನಿಖೆ ನಡೆಸಬಹುದಿತ್ತು. ಆದರೆ ಇಡಿ ದಾಳಿ ನಡೆಸಿರುವುದರ ಹಿಂದೆ ರಾಜಕೀಯ ಪ್ರೇರಿತ ಉದ್ದೇಶ ಇದೆಯೇ ಎಂಬುದನ್ನು ಕಾದು ನೋಡಬೇಕಿದೆ. ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದರ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ಸ್ಪಷ್ಟವಾಗಲಿವೆ ಎಂದು ಅಭಿಪ್ರಾಯಪಟ್ಟರು.
ಸತೀಶ್ ಜಾರಕಿಹೊಳಿ ಅವರ ಸಂಬಂಧಿಯಾಗಿರುವ ಕಾರಣಕ್ಕೆ ದಾಳಿ ನಡೆದಿದೆಯೇ ಅಥವಾ ಸಚಿವರ ಪ್ರಭಾವದಿಂದಲೇ ಆಸ್ತಿ ಸಂಪಾದಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಮಂಜುನಾಥ್ ಒಬ್ಬ ಸರ್ಕಾರಿ ಅಧಿಕಾರಿ ಮಾತ್ರ. ಅವರು ಕೆಲಸ ಮಾಡುವ ಇಲಾಖೆಯಲ್ಲಿ ನಮ್ಮ ಯಾವುದೇ ಪ್ರಭಾವ ಇರುವುದಿಲ್ಲ. ಅದು ಸೀಮಿತ ಅಧಿಕಾರದ ಹುದ್ದೆಯಾಗಿದೆ” ಎಂದು ಸ್ಪಷ್ಟಪಡಿಸಿದರು.
ಮಾವಲಿ ಚೆಕ್‌ಪೋಸ್ಟ್ ಸಮೀಪದ ರೆಸಾರ್ಟ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಆ ರೆಸಾರ್ಟ್ ಮಂಜುನಾಥ್ ಹೆಸರಿನಲ್ಲಿಲ್ಲ. ಅದು ಅವರ ಸಹೋದರರ ಹೆಸರಿನಲ್ಲಿದ್ದು, ಕಳೆದ 30 ವರ್ಷಗಳಿಂದ ಅವರ ಕುಟುಂಬವೇ ರೆಸಾರ್ಟ್ ಉದ್ಯಮ ನಡೆಸುತ್ತಿದೆ” ಎಂದು ತಿಳಿಸಿದರು.
ಇಡಿ ದಾಳಿ ನಡೆದು ಮೂರು ದಿನಗಳು ಕಳೆದಿದ್ದು, ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಬೇಕಾಗುತ್ತದೆ. ಇಂದು ಮಂಜುನಾಥ್ ಅವರನ್ನು ಭೇಟಿಯಾಗಿ ಪ್ರಕರಣದ ಕುರಿತು ಮಾಹಿತಿ ಪಡೆಯುತ್ತೇನೆ. ಬಳಿಕ ಅಗತ್ಯವಿದ್ದರೆ ಈ ಬಗ್ಗೆ ಮತ್ತಷ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.