ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ವತಿಯಿಂದ 2025ನೇ ಸಾಲಿನ ‘ಪುಸ್ತಕ ಸೊಗಸು–ಮುದ್ರಣ ಸೊಗಸು’ ಯೋಜನೆಯಡಿ ಆಯ್ಕೆಯಾದ ಕೃತಿಗಳ ಪೈಕಿ ಹಿರಿಯ ಕವಿ ಹಾಗೂ ಪ್ರಕಾಶಕ ಎ.ಎಸ್. ಮಕಾನದಾರ ಅವರ ‘ದರ್ವೇಶಿ ಪದ್ಯ’ ಕವನ ಸಂಕಲನದ ಮುಖಪುಟ ವಿನ್ಯಾಸಕ್ಕೆ ₹10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಲಭಿಸಿದೆ.
ಈ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎ.ಎಸ್. ಮಕಾನದಾರ ಅವರ ಅಕ್ಕಡಿ ಸಾಲು ಹಾಗೂ ಪ್ಯಾರಿ ಪದ್ಯ ಕವನ ಸಂಕಲನಗಳು ಆರು ಭಾಷೆಗಳಿಗೆ ಅನುವಾದಗೊಂಡಿದ್ದು, ಕುವೆಂಪು ವಿಶ್ವವಿದ್ಯಾಲಯ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಮಹಾರಾಷ್ಟ್ರದ ಶಿವಾಜಿ ವಿಶ್ವವಿದ್ಯಾಲಯ ಹಾಗೂ ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲೂ ಸ್ಥಾನ ಪಡೆದಿವೆ.
‘ದರ್ವೇಶಿ ಪದ್ಯ’ ಕೃತಿಯ ಮುಖಪುಟವನ್ನು ಚಿತ್ರಕಲಾವಿದ ಈಶ್ವರ ಬಡಿಗೇರ್ ವಿನ್ಯಾಸಗೊಳಿಸಿದ್ದು, ನಿರಂತರ ಪ್ರಕಾಶನ ಪ್ರಕಟಿಸಿದೆ. ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಸಾಹಿತಿ ಎ.ಎಸ್. ಮಕಾನದಾರ ಹಾಗೂ ಚಿತ್ರಕಲಾವಿದ ಈಶ್ವರ ಬಡಿಗೇರ್ ಅವರಿಗೆ ಗದಗ ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಸಾರಸ್ವತ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.