ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬರುವ ಜುಲೈ ತಿಂಗಳ ಮಾಸಿಕ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರಥಮ ಪರೀಕ್ಷೆಯಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಪಡೆದ ನಿವೃತ್ತ ಸೈನಿಕರು ಹಾಗೂ ಪ್ಯಾರಾ ಮಿಲಿಟರಿ ಯೋಧರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಹೇಳಿದರು.
ನಿವೃತ್ತ ಸೈನಿಕರು ಮತ್ತು ಪ್ಯಾರಾ ಮಿಲಿಟರಿ ಯೋಧರ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಿವೃತ್ತ ಸೈನಿಕರು ತಮ್ಮ ಪಿಂಚಣಿ ಹಾಗೂ ಇತರ ಸೌಲಭ್ಯಗಳಿಗಾಗಿ ಸಮೀಪದ ಎಸ್‌ಬಿಐ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದುವಂತೆ ಸಲಹೆ ನೀಡಿದರು.
ಜುಲೈ 26ರಂದು ನಡೆಯಲಿರುವ ಕಾರ್ಗಿಲ್ ವಿಜಯೋತ್ಸವವನ್ನು ಎಲ್ಲರೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಚರಿಸಬೇಕು ಎಂದು ಕರೆ ನೀಡಿದರು.
ನರೇಗಲ್ಲ ಸಿನಿಮಾ ಮಂದಿರದಿಂದ ಕೋಡಿಕೊಪ್ಪದವರೆಗೆ ನಿರ್ಮಿಸಿರುವ ಜೋಡು ರಸ್ತೆ ಅವೈಜ್ಞಾನಿಕವಾಗಿದ್ದು, ನಾಲ್ಕು ಕಡೆಯ ಎತ್ತರದಿಂದ ಅಪಘಾತಗಳು ಸಂಭವಿಸುತ್ತಿವೆ. ಉಳಿದ ಮೂರು ಕಡೆಗಳಲ್ಲಿ ರಸ್ತೆ ಇಳಿಜಾರು ಮಾಡದಿದ್ದರೆ ಒಂದು ವಾರದೊಳಗೆ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸೇವಾ ನಿವೃತ್ತಿ ಪಡೆದ ಚಂದ್ರಶೇಖರಪ್ಪ ಹರ್ತಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಮಲ್ಲನಗೌಡ್ರ, ಶಿವಪ್ಪ ಶಿವಾಪೂರ, ಮಂದಾಲಪ್ಪ ಸಂಗನಾಳ, ಬಸವೇಶ್ವರ ಚಿಕ್ಕೊಪ್ಪದ, ಸಂಗಪ್ಪ ಕುಷ್ಟಗಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
“ನಿವೃತ್ತ ಸೈನಿಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಇನ್ನಷ್ಟು ಸಾಧನೆಗೆ ಪ್ರೇರೇಪಿಸಲಾಗುವುದು.”
– ಶಿವಪುತ್ರಪ್ಪ ಸಂಗನಾಳ, ಅಧ್ಯಕ್ಷರು, ನಿವೃತ್ತ ಸೈನಿಕರ ಸಂಘ