ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್ಗೆ ಲೈಟಿಂಗ್ ಅಳವಡಿಸುವ ಕಾಮಗಾರಿ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪ ಸಂಭವಿಸಿದೆ.
ಮೃತ ಕಾರ್ಮಿಕನನ್ನು ಗುರಪ್ಪ (70) ಎಂದು ಗುರುತಿಸಲಾಗಿದೆ. ವೈಟ್ಫೀಲ್ಡ್–ಚಲ್ಲಘಟ್ಟ ನೇರಳೆ ಮಾರ್ಗದ ಟ್ರಿನಿಟಿ ಮೆಟ್ರೋ ನಿಲ್ದಾಣದ 153ನೇ ಪಿಲ್ಲರ್ ಸಮೀಪ ಈ ಅವಘಡ ನಡೆದಿದೆ.
ಬಿಎಂಆರ್ಸಿಎಲ್ನಿಂದ ಲೈಟಿಂಗ್ ಅಳವಡಿಸುವ ಕಾಮಗಾರಿಯ ಗುತ್ತಿಗೆಯನ್ನು ಎಂಆರ್ ಎಲೆಕ್ಟ್ರಿಕಲ್ಸ್ ಸಂಸ್ಥೆ ಪಡೆದಿತ್ತು. ಅದರಂತೆ ಗುರಪ್ಪ ಅವರು ಪಿಲ್ಲರ್ಗೆ ಲೈಟಿಂಗ್ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದರು.
ಲೈಟಿಂಗ್ ವ್ಯವಸ್ಥೆಗಾಗಿ ಅರ್ಥಿಂಗ್ ಗುಂಡಿ ಅಗೆಯುವ ವೇಳೆ ಡ್ರಿಲ್ಲಿಂಗ್ ಯಂತ್ರವು ನೆಲದಡಿಯಲ್ಲಿದ್ದ ವಿದ್ಯುತ್ ಕೇಬಲ್ಗೆ ತಾಗಿದ ಪರಿಣಾಮ ವಿದ್ಯುತ್ ಪ್ರವಹಿಸಿ ಗುರಪ್ಪ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ.
ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ಗುರುವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ನಡೆದಿದ್ದು, ಪ್ರಕರಣ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಘಡದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.