ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಸ್.ಆರ್.ಟಿ.ಸಿ. ನಿವೃತ್ತ ನಿರ್ವಾಹಕರಾದ ಬಸವರಾಜ ಅಡಿವೆಪ್ಪ ಕರಮುಡಿ ಹಾಗೂ ವಿಜಯಲಕ್ಷ್ಮಿ ಕರಮುಡಿ ದಂಪತಿಯ ಎರಡನೇ ಪುತ್ರಿ ಸ್ವಾತಿ ಬಸವರಾಜ ಕರಮುಡಿ ಅವರು 2026ರ ಜೂನ್‌ನಲ್ಲಿ ನಡೆದ ಸಿ.ಎ. (ಚಾರ್ಟರ್ಡ್ ಅಕೌಂಟೆಂಟ್) ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸ್ವಾತಿ ಅವರು ಪ್ರಾಥಮಿಕ ಶಿಕ್ಷಣವನ್ನು ವಾಸವಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ವಿ.ಡಿ.ಎಸ್.ಟಿ.ಸಿ. ಹೆಣ್ಣು ಮಕ್ಕಳ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ಜೆ.ಟಿ. ಮಹಾವಿದ್ಯಾಲಯದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.99 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದರು.
ನಂತರ ಯಾವುದೇ ಕೋಚಿಂಗ್ ಪಡೆಯದೆ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ಉತ್ತೀರ್ಣರಾಗಿ, ಬೆಂಗಳೂರಿನ ಎಂ.ಸಿ.ಎಸ್. ರಾಘವನ್ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ತರಬೇತಿ ಪೂರ್ಣಗೊಳಿಸಿ, ಸಹಾಯಕರಾಗಿ ಕಾರ್ಯನಿರ್ವಹಿಸುತ್ತಲೇ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.
ಸ್ವಾತಿ ಕರಮುಡಿ ಅವರ ಸಾಧನೆಗೆ ತಂದೆ-ತಾಯಿ, ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಜಾಗೃತ ನಾಗರಿಕರ ವೇದಿಕೆ ಅಧ್ಯಕ್ಷ ಎಂ.ಎಫ್. ಡೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



