ವಿಜಯಸಾಕ್ಷಿ ಸುದ್ದಿ, ಗದಗ: ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹಾಗೂ ವೈಯಕ್ತಿಕ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಆಗ್ರಹಿಸಿದರು.
ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹಾಗೂ ವೈಯಕ್ತಿಕ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಆಗ್ರಹಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶ್ರಮ ಅಕಾಡೆಮಿಗೆ ಮೂರು ಸಿಎ ಸೈಟ್ ಮಂಜೂರಾತಿ ಕುರಿತು ನ್ಯಾಯಾಲಯ ಪ್ರಶ್ನಿಸಿರುವ ಸಂದರ್ಭದಲ್ಲಿ ಅದಕ್ಕೆ ಉತ್ತರಿಸುವ ಬದಲು ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ರಾಜಕಾರಣದಲ್ಲಿ ಮಾತು ಮತ್ತು ನಡವಳಿಕೆಗೆ ಮಿತಿ ಇರಬೇಕು. ಟೀಕೆ-ಟಿಪ್ಪಣಿ ಸಹಜವಾದರೂ ವೈಯಕ್ತಿಕ ನಿಂದನೆ ಸಲ್ಲದು. ಕುಮಾರಸ್ವಾಮಿ ಅವರಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದು, ಇದೇ ರೀತಿಯ ಭಾಷೆಯನ್ನು ಪ್ರದೀಪ್ ಈಶ್ವರ್ ಮುಂದುವರಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರದೀಪ್ ಈಶ್ವರ್ ತಾವು ಹಿಂದುಳಿದ ಸಮುದಾಯದ ಶಾಸಕ ಎಂದು ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿಯೇ ಹಿಂದುಳಿದ ವರ್ಗದ ಅನೇಕ ಹಿರಿಯ ನಾಯಕರು ಮತ್ತು ಶಾಸಕರಿದ್ದು, ಅವರಿಂದ ರಾಜಕೀಯ ಸಂಸ್ಕಾರ ಕಲಿಯಬೇಕು. ಮೀಸೆ ತಿರುವುವುದು, ಸೆಡ್ಡು ಹೊಡೆಯುವುದರಿಂದ ಯಾರೂ ಹೆದರುವುದಿಲ್ಲ. ಜೆಡಿಎಸ್ ಬಾಡಿಗೆ ಪಕ್ಷವಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಗ್ಯಾರಂಟಿ ಸಮಿತಿ ಸದಸ್ಯರು ಸಚಿವರಂತೆ ಅಧಿಕಾರಿಗಳ ಸಭೆ ನಡೆಸುವುದಕ್ಕಿಂತ ಯೋಜನೆಗಳ ಸಮರ್ಪಕ ಅನುಷ್ಠಾನದತ್ತ ಗಮನ ಹರಿಸಬೇಕು. ಸತ್ತವರ ಹೆಸರಿನಲ್ಲಿ ಹಾಗೂ ಖಾತೆಯೇ ಇಲ್ಲದವರ ಹೆಸರಿನಲ್ಲಿ ಹಣ ಜಮೆಯಾಗಿರುವುದಾಗಿ ಸರ್ಕಾರವೇ ಹೇಳುತ್ತಿದೆ. ಹೀಗಿದ್ದರೂ ಗ್ಯಾರಂಟಿ ಸಮಿತಿ ವಿಫಲವಾಗಿದ್ದು, ಅದನ್ನು ವಿಸರ್ಜಿಸಬೇಕು ಎಂದು ಒತ್ತಾಯಿಸಿದರು.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ತೆರಿಗೆ ಪಾವತಿಸುವ ಮಹಿಳೆಯರಿಗೆ ನೀಡದಿರುವ ನಿರ್ಧಾರ ಸರಿಯಲ್ಲ. ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸರ್ಕಾರ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಮರೇಶ ಅಂಗಡಿ, ಬಸವರಾಜ ಅಪ್ಪಣ್ಣವರ, ಪ್ರಫುಲ್ ಪುಣೇಕರ್ ಹಾಗೂ ಜಿ.ಕೆ. ಕೊಳ್ಳಿಮಠ ಉಪಸ್ಥಿತರಿದ್ದರು.
“ರಾಜಕಾರಣದಲ್ಲಿ ಟೀಕೆ ಸಹಜ, ಆದರೆ ವೈಯಕ್ತಿಕ ನಿಂದನೆ ಸರಿಯಲ್ಲ. ಕುಮಾರಸ್ವಾಮಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಳನ್ನು ಪ್ರದೀಪ್ ಈಶ್ವರ್ ತಕ್ಷಣ ನಿಲ್ಲಿಸಬೇಕು.”
ವಿ.ಆರ್. ಗೋವಿಂದಗೌಡ್ರ, ಜೆಡಿಎಸ್ ರಾಜ್ಯ ವಕ್ತಾರ



