ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ, ಸೂರಣಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಮೆಕ್ಕೆಜೋಳದ ಬೆಳೆ ಒಣಗುತ್ತಿದ್ದು, ರೈತರು ಅನಿವಾರ್ಯವಾಗಿ ಬೆಳೆ ಹರಗುತ್ತಿದ್ದಾರೆ.
ಮೇ ಕೊನೆ ಹಾಗೂ ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಸಾಲ ಮಾಡಿ ಬೀಜ, ಗೊಬ್ಬರ ಹಾಗೂ ಕೃಷಿ ಔಷಧ ಖರೀದಿಸಿ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಸುರಿದ ಅಲ್ಪ ಮಳೆಯ ಬಳಿಕ ಮಳೆ ಸಂಪೂರ್ಣ ನಿಂತಿದ್ದರಿಂದ ತೇವಾಂಶದ ಕೊರತೆಯಿಂದ ಬೆಳೆ ಬಾಡಿ ಒಣಗಿದೆ. ಈಗ ಮಳೆ ಬಂದರೂ ಬೆಳೆ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲದ ಕಾರಣ ರೈತರು ಹೊಲಗಳನ್ನು ಮತ್ತೆ ಉಳುಮೆ ಮಾಡುತ್ತಿದ್ದಾರೆ.
ಒಂದು ಎಕರೆಗೆ 15ರಿಂದ 20 ಸಾವಿರ ರೂ.ವರೆಗೆ ವೆಚ್ಚ ಮಾಡಿರುವ ರೈತರು ಬೆಳೆ ಹಾನಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮರುಪಾವತಿ, ಜಾನುವಾರುಗಳಿಗೆ ಮೇವು ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ. ಮಳೆಗಾಗಿ ಕೆಲ ಗ್ರಾಮಗಳಲ್ಲಿ ವಿಶೇಷ ಪೂಜೆಗಳನ್ನೂ ನಡೆಸಲಾಗುತ್ತಿದೆ.
ರೈತ ಮುಖಂಡ ಗಂಗಾಧರ ಗಾಣಿಗೇರ ಮಾತನಾಡಿ, “ಈ ಭಾಗದಲ್ಲಿ ಮೆಕ್ಕೆಜೋಳದ ಬೆಳೆ ಸಂಪೂರ್ಣ ಹಾಳಾಗುತ್ತಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ, ಬರಪೀಡಿತ ಪ್ರದೇಶವೆಂದು ಘೋಷಿಸಿ ಸೂಕ್ತ ಪರಿಹಾರ, ಬೆಳೆ ವಿಮೆ ಹಾಗೂ ಕೃಷಿ ಸಾಲ ಮರುಪಾವತಿಗೆ ವಿನಾಯಿತಿ ನೀಡಬೇಕು. ಮುಂದಿನ ಬಿತ್ತನೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ರೈತರ ನೆರವಿಗೆ ಬರಬೇಕು,” ಎಂದು ಆಗ್ರಹಿಸಿದರು.
ರೈತರು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.



