ಶಿವಮೊಗ್ಗ: ಗಾಂಜಾ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಅಜ್ಜಿಯನ್ನೇ ಮೊಮ್ಮಗ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಬೆಚ್ಚಿಬೀಳಿಸುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಹತ್ಯೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಶಿವಮೊಗ್ಗ ನಗರದ ಮಿಳಘಟ್ಟ ವಾರ್ಡ್‌ನ ಆನಂದರಾವ್ ಬಡಾವಣೆಯ ತಖ್ವಾ ಮಸೀದಿ ಎದುರಿನ ರಸ್ತೆಯಲ್ಲಿ ಈ ಭೀಕರ ಕೃತ್ಯ ನಡೆದಿದ್ದು, ಸುಶೀಲಮ್ಮ (55) ಕೊಲೆಯಾದ ವೃದ್ಧೆ. ಕಿಶೋರ್ (26) ಕೊಲೆ ಆರೋಪಿ.
ಪ್ರಾಥಮಿಕ ಮಾಹಿತಿಯಂತೆ, ಆರೋಪಿ ಕಿಶೋರ್ ತನ್ನ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಇದಕ್ಕೆ ಅಜ್ಜಿ ಸುಶೀಲಮ್ಮ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಬುಧವಾರ ಸಂಜೆ ಗಾಂಜಾ ನಶೆಯಲ್ಲಿದ್ದ ಕಿಶೋರ್ ಮತ್ತೊಮ್ಮೆ ಅಜ್ಜಿಯೊಂದಿಗೆ ಗಲಾಟೆ ನಡೆಸಿದ್ದಾನೆ.
ಬಳಿಕ ಪೊಲೀಸರಿಗೆ ದೂರು ನೀಡಲು ಮನೆಯಿಂದ ಹೊರಟಿದ್ದ ಸುಶೀಲಮ್ಮ ಅವರ ಮೇಲೆ ಹಿಂಬದಿಯಿಂದ ದಾಳಿ ನಡೆಸಿದ ಆರೋಪಿ, ಅವರನ್ನು ತಳ್ಳಿಹಾಕಿದ್ದಾನೆ. ನೆಲಕ್ಕೆ ಬಿದ್ದ ತಕ್ಷಣ ತಲೆಯ ಮೇಲೆ ಬೃಹತ್ ಕಲ್ಲು ಎತ್ತಿಹಾಕಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಎರಡು ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.



