ಕೋಲಾರ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕೋಲಾರದಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ವಿವಾದಕ್ಕೆ ಕಾರಣವಾಗಿದೆ. ಮನೆಮನೆ ಸಮೀಕ್ಷೆ ನಡೆಸುವ ಬದಲು ಸಾರ್ವಜನಿಕರನ್ನೇ ಅಂಗನವಾಡಿ ಕೇಂದ್ರ, ಸಮುದಾಯ ಭವನ ಹಾಗೂ ಶಾಲೆಗಳಿಗೆ ಕರೆಸಿ ಅರ್ಜಿ ಭರ್ತಿ ಮಾಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ನಗರದ ಬಹುತೇಕ ಬಡಾವಣೆಗಳಲ್ಲಿ ಕಳೆದ ಎರಡು ದಿನಗಳಿಂದ ಇದೇ ಮಾದರಿಯ ಕ್ಯಾಂಪ್‌ಗಳು ನಡೆಯುತ್ತಿವೆ. BLOಗಳು ಸ್ಥಳೀಯ ಕೇಂದ್ರಗಳಲ್ಲಿ ಟೇಬಲ್ ಹಾಕಿಕೊಂಡು ಕುಳಿತು ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಸಂಬಂಧಿತ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ.
ಕುರುಬರಪೇಟೆ ಬಡಾವಣೆಯಲ್ಲೂ ಇದೇ ವಿಧಾನ ಅನುಸರಿಸಲಾಗುತ್ತಿದ್ದು, ಸಾರ್ವಜನಿಕರು ನೇರವಾಗಿ ಅಂಗನವಾಡಿ ಕೇಂದ್ರಕ್ಕೆ ತೆರಳಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಮನೆಮನೆ ಪರಿಶೀಲನೆ ಕಡ್ಡಾಯವಾಗಿರುವ ಸಂದರ್ಭದಲ್ಲೇ ಈ ಪರ್ಯಾಯ ವಿಧಾನ ಅನುಸರಿಸಿರುವುದು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪಾಲನೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.



