ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ ನೌಕರರಿಗೆ ಅನುಕೂಲವಾಗುವಂತೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯರು ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ನಡೆದ ಸಮಾವೇಶದ ಬಳಿಕ ಸಂಘದ ಅಧ್ಯಕ್ಷ ಎಸ್.ಸಿ. ಗೋಲಪ್ಪನವರ, ಆರ್.ಎಚ್. ನರೇಗಲ್ಲ ಹಾಗೂ ಎಲ್.ಎಸ್. ಅರಳಹಳ್ಳಿ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ತಹಸೀಲ್ದಾರ್ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, 2006ರ ನಂತರ ನೇಮಕಗೊಂಡ ಅನುದಾನಿತ ಶಾಲಾ ನೌಕರರ ಬಹುದಿನಗಳ ಬೇಡಿಕೆಯಾಗಿರುವ ಹಳೆ ಪಿಂಚಣಿ ಯೋಜನೆಯನ್ನು ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ. ಹಲವು ಬಾರಿ ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಕೂಡಲೇ ಓಪಿಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಅನುದಾನಿತ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಕಾಲ್ಪನಿಕ ವೇತನ ಜಾರಿಗೊಳಿಸುವುದು, ಕೆಪಿಎಸ್ ಹಾಗೂ ಪಿಎಂ ಶ್ರೀ ಶಾಲೆಗಳನ್ನು ಅನುದಾನಿತ ಶಾಲೆಗಳಿಂದ ಮೂರು ಕಿಲೋಮೀಟರ್ ವ್ಯಾಪ್ತಿಯ ಹೊರಗೆ ಆರಂಭಿಸುವುದು, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳನ್ನು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೂ ವಿಸ್ತರಿಸುವುದು, ಶಿಕ್ಷಕರಿಗೆ ಬೋಧನಾ ಕಾರ್ಯ ಹೊರತುಪಡಿಸಿ ಇತರೆ ಕೆಲಸಗಳನ್ನು ನೀಡದಿರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎ.ಜಿ. ಲಿಂಗಶೆಟ್ಟರ, ಬಿ.ಬಿ. ಬಳಿಗಾರ, ವಿ.ಸಿ. ಬೆಂಡಿಗೇರಿ, ಎಂ.ಬಿ. ಕಲ್ಲೂರ, ಟಿ.ಎಸ್. ಹೂಗಾರ, ಆರ್.ಆರ್. ಅಯ್ಯನಗೌಡ್ರ, ಪಿ.ಟಿ. ಪವಾರ, ಎಸ್.ಬಿ. ಬೆಟಗೇರಿ, ಎ.ಬಿ. ಹೂಗಾರ, ಎಂ.ಎಚ್. ಬೆಳಗಟ್ಟಿ, ವಿ.ಎಸ್. ಹಿರೇಮಠ, ಎಂ.ಎಸ್. ಚೌಧರಿ, ಆರ್.ಎಚ್. ನರೇಗಲ್ಲ, ಜಿ.ಎನ್. ಮೆಳ್ಳಳ್ಳಿ, ಎಂ.ಸಿ. ಹಿರೇಮಠ, ಆರ್.ಸಿ. ಉಮಚಗಿ, ಎಸ್.ಎಸ್. ಮಠದ, ಎಸ್.ಎಂ. ಹಾದಿಮನಿ, ಎ.ಎಂ. ಛತ್ರದ, ಎಲ್.ಎಂ. ಹುರಳಿಕೊಪ್ಪಿ, ಪಿ.ಎಲ್. ಪಾಟೀಲ, ಶೀಲಾ ತಳವಾರ ಸೇರಿದಂತೆ ಹಲವರು ಭಾಗವಹಿಸಿದ್ದರು.
“2006ರ ನಂತರ ನೇಮಕಗೊಂಡ ಅನುದಾನಿತ ಶಾಲಾ ನೌಕರರ ಬಹುದಿನಗಳ ಬೇಡಿಕೆಯಾಗಿರುವ ಹಳೆ ಪಿಂಚಣಿ ಯೋಜನೆಯನ್ನು ಸರ್ಕಾರ ಕೂಡಲೇ ಮರುಜಾರಿಗೊಳಿಸಬೇಕು.”
– ಎಲ್.ಎಸ್. ಅರಳಹಳ್ಳಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ



