ಶಿವಮೊಗ್ಗ: ಹೊಸನಗರ ತಾಲೂಕಿನ ಗವಟೂರು ಹೊಳೆ ಬಳಿ ಹೃದಯ ಕಲಕುವ ಘಟನೆ ನಡೆದಿದೆ. ಕೇವಲ 10ರಿಂದ 15 ದಿನಗಳ ನವಜಾತ ಹೆಣ್ಣು ಮಗುವನ್ನು ಕೈಚೀಲದಲ್ಲಿ ಹಾಕಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಬಿಳಿ ಬಟ್ಟೆಯಲ್ಲಿ ಸುತ್ತಿದ ಮಗುವನ್ನು ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ನೇತು ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಾತ್ರಿ ವೇಳೆ ಮಗುವಿನ ಅಳುವ ಶಬ್ದ ಕೇಳಿದ ಸ್ಥಳೀಯ ನಿವಾಸಿ ಸ್ಥಳ ಪರಿಶೀಲಿಸಿದಾಗ ಚೀಲದೊಳಗೆ ನವಜಾತ ಶಿಶು ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಮಾಹಿತಿ ಪಡೆದ ರಿಪ್ಪನ್ಪೇಟೆ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಆರೋಗ್ಯ ತಪಾಸಣೆಯಲ್ಲಿ 1.6 ಕೆ.ಜಿ ತೂಕವಿರುವ ಮಗು ಆರೋಗ್ಯವಾಗಿರುವುದು ತಿಳಿದುಬಂದಿದ್ದು, ಹೆಚ್ಚಿನ ಆರೈಕೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಮಗು ಶಿಶು ಆರೈಕೆ ಕೇಂದ್ರದಲ್ಲಿ ಸುರಕ್ಷಿತವಾಗಿದ್ದು, ನವಜಾತ ಶಿಶುವನ್ನು ಬಿಟ್ಟು ಹೋದವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



