ಮಂಗಳೂರು: ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಉಷಾ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
1950ರ ಮೇ 2ರಂದು ಸುಳ್ಯದಲ್ಲಿ ಜನಿಸಿದ್ದ ಗಿರೀಶ್ ಭಾರದ್ವಾಜ್ ಅವರು 1973ರಲ್ಲಿ ಮಂಡ್ಯದ ಪಿಇಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು.
ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅವರು, 1989ರಲ್ಲಿ ತಮ್ಮ ಸ್ವಗ್ರಾಮ ಸುಳ್ಯದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಮೊದಲ ಕಡಿಮೆ ವೆಚ್ಚದ ತೂಗು ಸೇತುವೆ ನಿರ್ಮಿಸುವ ಮೂಲಕ ತಮ್ಮ ಸೇವಾ ಪಯಣ ಆರಂಭಿಸಿದ್ದರು.
ದುರ್ಗಮ ಪ್ರದೇಶಗಳು, ಕಾಡು ಪ್ರದೇಶಗಳು ಹಾಗೂ ರಸ್ತೆ ಸಂಪರ್ಕವಿಲ್ಲದ ಗ್ರಾಮಗಳಿಗೆ ಅವರ ತೂಗು ಸೇತುವೆಗಳು ಜೀವನಾಡಿಯಾಗಿದ್ದವು. ಕರ್ನಾಟಕ ಮಾತ್ರವಲ್ಲದೆ ಕೇರಳ, ಒಡಿಶಾ, ತೆಲಂಗಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ 120ಕ್ಕೂ ಹೆಚ್ಚು ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದ ತೂಗು ಸೇತುವೆಗಳನ್ನು ನಿರ್ಮಿಸಿದ್ದರು.
ಅವರ ಅಪೂರ್ವ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2017ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತ್ತು.
ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಗಣ್ಯರು, ತಾಂತ್ರಿಕ ಕ್ಷೇತ್ರದ ತಜ್ಞರು ಹಾಗೂ ಗ್ರಾಮೀಣ ಭಾಗದ ಜನರು ಸಂತಾಪ ಸೂಚಿಸಿದ್ದಾರೆ. ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿದ ಮಹಾನ್ ತಾಂತ್ರಿಕ ಚೇತನವೊಂದು ಕಳೆದುಹೋದಂತಾಗಿದೆ.



