ದಾವಣಗೆರೆ: ಮಲೆನಾಡು ಭಾಗದಲ್ಲಿ ಕಳೆದ ಎರಡು–ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ತುಂಗಾಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹರಿಹರ ತಾಲೂಕಿನ ಪ್ರಸಿದ್ಧ ಉಕ್ಕಡಗಾತ್ರಿ ಶ್ರೀಕ್ಷೇತ್ರದಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ಅಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿದೆ. ಇದರಿಂದ ಹರಿಹರ ತಾಲೂಕಿನ ಮೂಲಕ ಹರಿಯುವ ತುಂಗಾಭದ್ರಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿ, ಉಕ್ಕಡಗಾತ್ರಿ ಶ್ರೀಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಆವರಿಸಿದೆ.
ನದಿಯ ಅಕ್ಕಪಕ್ಕದಲ್ಲಿರುವ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟ, ಜವಳಘಟ್ಟ ಹಾಗೂ ಹೂವು-ಹಣ್ಣು ವ್ಯಾಪಾರದ ಅಂಗಡಿಗಳು ಜಲಾವೃತವಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರು ನದಿ ಪಾತ್ರಕ್ಕೆ ಇಳಿಯದಂತೆ ದೇವಾಲಯದ ಆಡಳಿತ ಮಂಡಳಿ ಸೂಚನೆ ನೀಡಿದೆ.
ಭದ್ರಾ ಜಲಾಶಯದಿಂದಲೂ ನೀರು ಬಿಡುಗಡೆ ಮಾಡಿದರೆ, ನದಿ ದಂಡೆಯಲ್ಲಿರುವ ಗಣೇಶ ದೇವಸ್ಥಾನವೂ ಜಲಾವೃತವಾಗುವ ಸಾಧ್ಯತೆ ಇದೆ. ಜೊತೆಗೆ ನದಿಯ ಸೆಳೆತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಕ್ತರು ಆ ಭಾಗಕ್ಕೆ ತೆರಳದಂತೆ ದೇವಾಲಯದ ಆಡಳಿತ ಮಂಡಳಿ ಸೂಚನಾ ಫಲಕ ಅಳವಡಿಸಲು ಮುಂದಾಗಿದೆ.
ಸದ್ಯ ನದಿಯ ಹರಿವು ನಿಯಂತ್ರಣದಲ್ಲಿದ್ದರೂ, ಮಳೆ ಇದೇ ರೀತಿ ಮುಂದುವರಿದು ನೀರಿನ ಮಟ್ಟ ಮತ್ತಷ್ಟು ಏರಿದರೆ ನಂದಿಗುಡಿಯಿಂದ ಉಕ್ಕಡಗಾತ್ರಿಗೆ ಸಂಪರ್ಕಿಸುವ ರಸ್ತೆ ಮತ್ತು ಸೇತುವೆ ಸಂಪೂರ್ಣ ಜಲಾವೃತವಾಗುವ ಸಾಧ್ಯತೆ ಇದೆ. ಅಲ್ಲದೆ ಭದ್ರಾ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಿದರೆ ಫತ್ತೇಪುರ–ಉಕ್ಕಡಗಾತ್ರಿ ಸಂಪರ್ಕ ರಸ್ತೆ ಮತ್ತು ಸೇತುವೆಯೂ ಮುಳುಗಡೆಯಾಗುವ ಆತಂಕ ವ್ಯಕ್ತವಾಗಿದೆ.



