ಬೆಂಗಳೂರು: ನಟ ದರ್ಶನ್ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ತನಿಖೆ ತೀವ್ರಗೊಂಡಿದ್ದು, ಪ್ರಕರಣದ ಹಿಂದೆ ಕೆಲ ‘ಪ್ರಭಾವಿ’ ವ್ಯಕ್ತಿಗಳ ಕೈವಾಡವಿರುವ ಶಂಕೆ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆಯಲ್ಲಿ ಅವರ ಪಾತ್ರವನ್ನು ಪತ್ತೆಹಚ್ಚಲು ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಡಿ ಪುನೀತ್, ಸುಹಾಸ್ ಹಾಗೂ ವೇಣು ಎಂಬ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ತನಿಖೆ ವೇಳೆ ಆರೋಪಿಗಳಿಂದ ಹೇಳಿಕೆ ಮತ್ತು ಮರು ಹೇಳಿಕೆಗಳನ್ನು ಪಡೆಯಲಾಗುತ್ತಿದ್ದು, ಪ್ರಮುಖ ಆರೋಪಿ ಪುನೀತ್ ಪದೇ ಪದೇ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿರುವುದಾಗಿ ತಿಳಿದುಬಂದಿದೆ. ಸಾಕ್ಷಿಯ ಹೇಳಿಕೆಯನ್ನು ಬದಲಾಯಿಸಲು ‘ಡೀಲ್’ ಪಡೆದಿದ್ದಾನೆ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಇದು ತನಿಖೆಗೆ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ.
ಆರೋಪಿಗಳ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಬಂಧನಕ್ಕೂ ಮುನ್ನ ಮೊಬೈಲ್ ಕರೆ ವಿವರಗಳು, ವಾಟ್ಸ್‌ಆ್ಯಪ್ ಚಾಟ್ ಸೇರಿದಂತೆ ಹಲವು ಮಾಹಿತಿಗಳನ್ನು ಆರೋಪಿಗಳು ಅಳಿಸಿದ್ದರೂ, ಫಾರೆನ್ಸಿಕ್ ತಂತ್ರಜ್ಞಾನದ ಮೂಲಕ ಅವುಗಳನ್ನು ಮರುಪಡೆಯುವ ಪ್ರಯತ್ನ ನಡೆಯುತ್ತಿದೆ.
ಸಾಕ್ಷಿಗೆ ಬೆದರಿಕೆ ಹಾಕಿದ ಸಂದರ್ಭದಲ್ಲಿ ಕಾನ್ಫರೆನ್ಸ್ ಕಾಲ್ ಬಳಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಆ ಸಂಭಾಷಣೆಯಲ್ಲಿ ಆರೋಪಿಗಳ ಹೊರತಾಗಿ ಇನ್ನಾರು ಭಾಗಿಯಾಗಿದ್ದರು ಎಂಬುದು ಎಫ್‌ಎಸ್‌ಎಲ್ ವರದಿಯ ಬಳಿಕ ಬಹಿರಂಗವಾಗುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವೇಳೆ, ಪ್ರಕರಣದ 49ನೇ ಸಾಕ್ಷಿಯಾಗಿರುವ ದುರ್ಗಾ ಬಾರ್‌ನ ಸಿಬ್ಬಂದಿ ಸಂದೀಪ್ ಅವರಿಗೆ ಆಕರ್ಷ್ ಎಂಬ ವ್ಯಕ್ತಿಯ ಮೂಲಕ ಕರೆ ಮಾಡಿ, ನ್ಯಾಯಾಲಯದಲ್ಲಿ ತಾವು ಹೇಳಿದಂತೆ ಸಾಕ್ಷ್ಯ ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ.
ಆದರೆ ಸಂದೀಪ್ ನ್ಯಾಯಾಲಯದ ಮುಂದೆ ತಮಗೆ ಸುಳ್ಳು ಸಾಕ್ಷ್ಯ ಹೇಳುವಂತೆ ಬೆದರಿಕೆ ಹಾಕಲಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಆಧಾರದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಹಿಂದಿರುವ ಇತರರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.



