ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ 545 ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಹಗರಣದ ಪ್ರಮುಖ ಆರೋಪಿಯಾಗಿರುವ ಅಮಾನತುಗೊಂಡ ಎಡಿಜಿಪಿ ಅಮೃತ್ ಪೌಲ್ ವಿರುದ್ಧ ನಾಲ್ಕು ವರ್ಷಗಳ ಬಳಿಕ ಇಲಾಖಾ ತನಿಖೆ ಆರಂಭಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಕೃತ ಕ್ರಮ ಕೈಗೊಂಡಿದೆ.
ಹಗರಣ ನಡೆದ ಅವಧಿಯಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದ ಅಮೃತ್ ಪೌಲ್ ವಿರುದ್ಧ 2022ರಲ್ಲೇ ಸಿಐಡಿ ವಿಶೇಷ ತನಿಖಾ ತಂಡ (ಎಸ್ಐಟಿ) 1,406 ಪುಟಗಳ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಆದರೆ ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕವೂ ಇಲಾಖಾ ಮಟ್ಟದ ವಿಚಾರಣೆ ಆರಂಭವಾಗಿರಲಿಲ್ಲ. ಇದೀಗ ಜುಲೈ 9ರಂದು ಇಲಾಖಾ ಚಾರ್ಜ್ಶೀಟ್ ಜಾರಿಯಾಗಿದ್ದು, ಆಂತರಿಕ ತನಿಖೆಗೆ ಅಧಿಕೃತ ಚಾಲನೆ ದೊರೆತಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಲಾಖಾ ತನಿಖೆಗೆ ಅನುಮೋದನೆ ನೀಡಿದ್ದಾರೆ. ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು–1969ರ ನಿಯಮ 8(4)ರ ಅನ್ವಯ ವಿಚಾರಣೆ ಮುಂದುವರಿಯಲಿದೆ.
ಸಿಐಡಿ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಮತ್ತು ವರದಿಯ ಆಧಾರದ ಮೇಲೆ ಡಿಪಿಎಆರ್ ಅಮೃತ್ ಪೌಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ವಿರುದ್ಧದ ಆರೋಪಗಳಿಗೆ ಲಿಖಿತ ವಿವರಣೆ ಸಲ್ಲಿಸುವಂತೆ ಹಾಗೂ ಇಲಾಖಾ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಪ್ರಕರಣವು ಆರಂಭದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಉತ್ತರ ಕರ್ನಾಟಕದ ಎರಡು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿತ್ತು. ಬಳಿಕ ತನಿಖೆಯನ್ನು ಸಿಐಡಿ ಎಸ್ಐಟಿಗೆ ವರ್ಗಾಯಿಸಲಾಗಿತ್ತು.
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ಹುದ್ದೆಯ ಅಧಿಕಾರಿಯೊಬ್ಬರು ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಜೈಲು ಶಿಕ್ಷೆ ಅನುಭವಿಸಿದ್ದರು. ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅಮೃತ್ ಪೌಲ್ ವಿರುದ್ಧ ಇದೀಗ ಇಲಾಖಾ ಮಟ್ಟದ ತನಿಖೆ ಆರಂಭವಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.



