ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ್ರ ಬಣ) ಜಿಲ್ಲಾಧ್ಯಕ್ಷ ಎಂ.ಪಿ. ಪರ್ವತಗೌಡ್ರ ಎಚ್ಚರಿಕೆ ನೀಡಿದರು.
ಈ ಕುರಿತು ಕರವೇ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗಿಂತ ಗದಗ ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದರಿಂದ ಅಕ್ರಮ ದಂಧೆ ನಿರಾತಂಕವಾಗಿ ಸಾಗುತ್ತಿದೆ ಎಂದು ಆರೋಪಿಸಿದರು.
ಕಾನೂನು ಹಾಗೂ ನಿಯಮಾವಳಿಗಳನ್ನು ಸಂಪೂರ್ಣ ಉಲ್ಲಂಘಿಸಿ ಹಗಲಿರುಳು ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದ್ದು, ಇದರಿಂದ ಸರ್ಕಾರದ ಆದಾಯಕ್ಕೂ ನಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ದಾಳಿ ನಡೆಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸಯ್ಯ ಗುಡ್ಡಿಮಠ, ಶರಣಪ್ಪ ಹೊನ್ನಪ್ಪನವರ, ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಾರ್ವತಿ ಪಾಟೀಲ, ಲಕ್ಷ್ಮಿ ಶಿವಸಿಂಪಿಗೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಶುರಾಮ ಬನ್ನುರ, ರೈತ ಸಂಘದ ಬಸವರಾಜ ಬಜಂತ್ರಿ, ಮಂಜುನಾಥ ಹೊನ್ನಪ್ಪನವರ, ಮಂಜುನಾಥ ಭಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಅಕ್ರಮ ಮಣ್ಣು ಗಣಿಗಾರಿಕೆಗೆ ಜಿಲ್ಲಾಡಳಿತ ತಕ್ಷಣ ಕಡಿವಾಣ ಹಾಕಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ತೀವ್ರ ಹೋರಾಟ ಆರಂಭಿಸಲಾಗುವುದು.”
– ಎಂ.ಪಿ. ಪರ್ವತಗೌಡ್ರ, ಜಿಲ್ಲಾಧ್ಯಕ್ಷ, ಕರವೇ (ಎಚ್. ಶಿವರಾಮೇಗೌಡ್ರ ಬಣ)



